ಮಂಡ್ಯ ಜಿಲ್ಲೆಯಲ್ಲಿ ಬರಪೀಡಿತವೆಂದು ಘೋಷಿಸಿ: ಸೆ.7ರಂದು ಬೆಂಗಳೂರಿನಲ್ಲಿ ಕಿಸಾನ್ ಸಂಘದಿಂದ ಪ್ರತಿಭಟನೆ

1 (5)
Published on

ಮಂಡ್ಯ: ಜಿಲ್ಲೆಯ ಎಲ್ಲ ತಾಲೂಕನ್ನು ಬರಪೀಡಿತವೆಂದು ಘೋಷಿಸುವಂತೆ ಒತ್ತಾಯಿಸಿ ಸೆ.7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶರಾಜು ತಿಳಿಸಿದರು.

ಕಾವೇರಿಕೊಳ್ಳದ ಜಲಾಶಯಗಳಲ್ಲಿದ್ದ ನೀರನ್ನು ಬಸಿದು ತಮಿಳುನಾಡಿಗೆ ಬಿಟ್ಟಿರುವ ರಾಜ್ಯ ಸರ್ಕಾರ ರೈತರ ಮೇಲೆ ಚಪ್ಪಡಿ ಎಳೆದಿದ್ದು, ಇದರಿಂದಾಗಿ ಕೃಷಿ ಚಟುವಟಿಕೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಮುಂಗಾರು ವೈಫಲ್ಯದಿಂದಾಗಿ ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗದೆ 113 ಅಡಿ ಬರುವಷ್ಟರಲ್ಲಿ ಮಳೆ ನಿಂತ ಕಾರಣ ಒಂದು ಬೆಳೆಯನ್ನಾದರೂ ಬೆಳೆಯಬಹುದು ಎಂಬ ಆಸೆ ಹೊತ್ತ ಅನ್ನದಾತರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದರು. ಕೃಷಿ ಸಚಿವರು ಸಹ ಕಟ್ಟು ನೀರು ಪದ್ಧತಿ ಪ್ರಕಾರ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ರಾಜ್ಯ ಸರ್ಕಾರ ನ್ಯಾಯಾಲಯ ಆದೇಶಕ್ಕೂ ಕಾಯದೆ ಏಕಾಏಕಿ ತಮಿಳುನಾಡಿಗೆ ಎಲ್ಲ ಜಲಾಶಯಗಳ ನೀರನ್ನು ಬಸಿದ ಪರಿಣಾಮ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಕಟ್ಟೆಯಲ್ಲಿ ನೀರಿನ ಸಂಗ್ರಹ ಕುಸಿದು ಕೇವಲ ಕುಡಿಯುವ ನೀರಿಗಷ್ಟೇ ಸೀಮಿತವಾಗಿದೆ. ಇದರಿಂದಾಗಿ ಎಂಟತ್ತು ಜಿಲ್ಲೆಗಳ ಜನರಿಗೆ ತೊಂದರೆಯಾಗಲಿದೆ. ಈ ವಾಸ್ತವ ಸ್ಥಿತಿಯನ್ನು ಜನರಿಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರ ಸಮಸ್ಯೆಗಳನ್ನಿಟ್ಟುಕೊಂಡು ನಡೆಸುವ ಧರಣಿ ಸತ್ಯಾಗ್ರಹ ವೇಳೆ ಸಾಮಾಜಿಕ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನತೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಸಂಘದ ವೆಂಕಟೇಶ್ ಪಣಕನಹಳ್ಳಿ, ಶಿವಣ್ಣ, ಗಾಣದಾಳು ನರಸಿಂಹನ್, ಬಿ.ಪಿ.ಅಪ್ಪಾಜಿ, ಬೆಟ್ಟಪ್ಪ, ಪುಟ್ಟಮ್ಮ ಶ್ರೀಕಂಠೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net