

ಧಾರವಾಡ: ಆಕಾಶವಾಣಿ ಧಾರವಾಡ ಕೇಂದ್ರ 75 ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ. ಇದು ಕೋಟ್ಯಂತರ ಜನರ ಹೃದಯ ತಲುಪಿದೆ. ಆಕಾಶವಾಣಿ ಮತ್ತು ಅಂಚೆ ಇಲಾಖೆಗಳು ಭಾರತೀಯ ಐತಿಹಾಸಿಕ ಪರಂಪರೆಯ ಹೆಗ್ಗುರುತು. ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಇಂಥ ಐಕಾನ್‌ಗಳನ್ನು ಉಳಿಸಿ ಬೆಳೆಸಲು ಕೇಂದ್ರ ಸರ್ಕಾರ ಬದ್ಧವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಸೃಜನಾ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಆಕಾಶವಾಣಿ ಧಾರವಾಡ ಕೇಂದ್ರದ ಅಮೃತ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ರೇಡಿಯೋ ಮೂಲಕವೇ ದೇಶ-ರಾಜ್ಯಗಳ ವಿದ್ಯಮಾನ ತಿಳಿದುಕೊಳ್ಳುವ ಕಾಲ ಇತ್ತು. ಹೀಗಾಗಿ ಪ್ರದೇಶ ಸಮಾಚಾರ ನಿತ್ಯ ಕೇಳುತ್ತಿದ್ದೆ. ಮಹಿಳಾ ರಂಗ, ಮಾವು ಮಲ್ಲಿಗೆ, ವನಿತಾ ವಿಹಾರ, ಗೃಹಲಕ್ಷ್ಮೀ ಕಾರ್ಯಕ್ರಮ, ಗಿಳಿವಿಂಡು, ಕೃಷಿ ರಂಗ, ರೇಡಿಯೋ ಡಾಕ್ಟರ್, ಸಾಮಾಜಿಕ ಸಂದೇಶ ಕೊಡುವ ನಾಟಕಗಳು ಪ್ರಸಾರ ಆಗುತ್ತಿದ್ದವು. ‘ಕರಿಎತ್ತ ಕಾಳಿಂಗ ಬಿಳಿಎತ್ತ ಮಾನಿಂಗ’ ಗೀತೆ ಹಾಗೂ ರೇಡಿಯೋ ಆರಂಭಕ್ಕೂ ಮುಂಚೆ ಕೇಳುತ್ತಿದ್ದ ಸಿಗ್ನೇಚರ್ ಟ್ಯೂನ್ ಇಂದಿಗೂ ಅನುರಣಿಸುತ್ತದೆ ಎಂದು ಸಚಿವ ಜೋಶಿ 50 ವರ್ಷಗಳ ಹಿಂದಿನ ನೆನಪುಗಳನ್ನು ಹಂಚಿಕೊಂಡರು.
ಅನೇಕ ಕಾರ್ಯಕ್ರಮಗಳು ಪ್ರಕೃತಿಯ ಬಗ್ಗೆಯೂ ಕಾಳಜಿಯನ್ನು ಹೆಚ್ಚಿಸುತ್ತಿದ್ದವು. ಪಂ. ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಬೇಂದ್ರೆಯಂಥವರನ್ನು ಪರಿಚಯಿಸಿ ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಿದ್ದು ಆಕಾಶವಾಣಿ. ಭಾರತೀಯ ಸಂಸ್ಕೃತಿಯಲ್ಲೂ ಆಕಾಶವಾಣಿಗೆ ವಿಶೇಷ ಅರ್ಥ ಇದೆ. ನಾಡು- ನುಡಿಯ ಬಗ್ಗೆ ಜಾಗೃತಿ ಮೂಡಿಸಿ, ಜಾನಪದಕ್ಕೆ ಅವಕಾಶ ಕಲ್ಪಿಸಿದ್ದು ಆಕಾಶವಾಣಿ. ಪ್ರಧಾನಿ ಮೋದಿಯವರು ಮನ್ ಕಿ ಬಾತ್ ಮೂಲಕ ದೂರದ ಜನರನ್ನು ತಲುಪುತ್ತಿದ್ದಾರೆ ಎಂದರು.
ಬೆಳಗಾವಿ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ನಮ್ಮದು ಚಿಕ್ಕೋಡಿ ತಾಲೂಕಿನ ಕೊನೇ ಹಳ್ಳಿ. ನಮ್ಮಲ್ಲಿ ಆಕಾಶವಾಣಿ ಬರುತ್ತಿರಲಿಲ್ಲ. ಪೇಟೆ ಧಾರಣೆ ಕೇಳಲು ಹರಸಾಹಸ ಪಡಬೇಕಾಗಿತ್ತು. ಪ್ರದೇಶ ಸಮಾಚಾರ ನನ್ನ ನೆಚ್ಚಿನ ಕಾರ್ಯಕ್ರಮವಾಗಿತ್ತು ಎಂದರು.
ಆಕಾಶವಾಣಿಯ ತರಂಗಾಂತರ ಹೆಚ್ಚಿಸಿ ಬೆಳಗಾವಿಯ ಗಡಿಭಾಗಕ್ಕೂ ಪ್ರಸಾರವಾಗುವಂತೆ ಮಾಡಬೇಕು ಎಂದು ಸಚಿವ ಜೋಶಿ ಅವರಲ್ಲಿ ಮನವಿ ಮಾಡಿದರು.
ಗಣ್ಯರು ‘ಅಮರವಾಣಿಯ ಅಮೃತ ಘಳಿಗೆ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ, ಆಕಾಶವಾಣಿ ನಿಲಯ ಉಪ ಮಹಾನಿರ್ದೇಶಕ ಅರುಣ ಪ್ರಭಾಕರ ಉಪಸ್ಥಿತರಿದ್ದರು.
ಆಕಾಶವಾಣಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಶರಣಬಸವ ಚೋಳಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಐಹೊಳೆ ಪ್ರಾರ್ಥಿಸಿದರು. ಮಂಜುಳಾ ಪುರಾಣಿಕ ಸ್ವಾಗತಿಸಿದರು. ಮಾಯಾ ರಾಮನ್ ನಿರೂಪಿಸಿದರು.