ಭಾರತೀಯ ಪರಂಪರೆಗಿದೆ ವಿಶಿಷ್ಠ ಸ್ಥಾನ: ಗೊಟಗೋಡಿ ಜಾನಪದ ವಿವಿಯಲ್ಲಿ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ

JANAPADA VVI GOTAGODI
Published on

ಶಿಗ್ಗಾಂವಿ: ಭಾರತ ಐತಿಹಾಸಿಕ, ಸಾಂಸ್ಕೃತಿಕವಾಗಿ ತನ್ನದೇ ಆದ ಪರಂಪರೆ ಹೊಂದಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ರಾಷ್ಟ್ರೀಯತೆಯ ಬಗ್ಗೆ ವಿಚಾರ ವಿನಿಮಯವಾಗುತ್ತದೆ. ಹಾಗಾಗಿ ರಾಷ್ಟ್ರೀಯ ಸದ್ಭಾವನ ದಿನದ ಸಂದರ್ಭದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ. ಎಂ. ಭಾಸ್ಕರ್ ಹೇಳಿದರು.

ಗೊಟಗೋಡಿಯ ಕರ್ನಾಟಕ ಜಾನಪದ ವಿವಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನು ಪ್ರಾಯೋಗಿಕ ಗುಣವನ್ನು ಅಳವಡಿಸಿಕೊಳ್ಳಬೇಕು, ಅಂದಾಗ ಮಾತ್ರ ಜೀವನದ ಬಗ್ಗೆ ಅರಿವಾಗುತ್ತದೆ ಎಂದರು.

ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕನ ದಿನವನ್ನು ಇಂದು ಸದ್ಭಾವನಾ ದಿನವನ್ನಾಗಿ ಆಚರಿಸುತ್ತಿದ್ದೇವೆ. ಹಾಗಾಗಿ ಅವರ ಆಶಯದಂತೆ ದೇಶದಲ್ಲಿ ಎಲ್ಲರೂ ಶಾಂತಿ, ಸಹಬಾಳ್ವೆ , ಸೌಹಾರ್ದದಿಂದ ಜೀವನ ನಡೆಸಬೇಕು ಎಂದರು.

ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎನ್.ಎಂ. ಸಾಲಿ ಮಾತನಾಡಿ ಸಾಮ್ರಾಟ ಅಶೋಕನಿಂದ ಹಿಡಿದು ಮಹಾತ್ಮ ಗಾಂಧಿ ಕಾಲದ ವರೆಗೂ ಭಾರತವು ತನ್ನ ಪರಂಪರೆಯನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ನಮ್ಮ ದೇಶವು ವಿವಿಧ ಧರ್ಮಗಳ ಶಾಂತಿಯ ತೋಟವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಕ್ಷರವಂತರಿಂದ ಅಸೂಯೆ, ಅಸಹಕಾರ ಇತರೆ ಗುಣಗಳಿಂದ ಶಾಂತಿ ಕದಡುವ ಕೆಲಸವಾಗುತ್ತಿರುವುದು ವಿಷಾದನೀಯ ಎಂದರು.

ಜನಪದ ಕಲಾವಿದ, ವಿವಿ ಕಿರಿಯ ಸಹಾಯಕ ಪ್ರಾಧ್ಯಾಪಕ ಶರೀಫ್ ಮಾಕಪ್ಪನವರ ಸದ್ಭಾವನ ಗೀತೆಗಳನ್ನು ಹಾಡಿದರು. ಪ್ರೊ. ಟಿ.ಎಂ. ಭಾಸ್ಕರ್ ಪ್ರತಿಜ್ಞಾವಿಧಿ ಭೋದಿಸಿದರು. ಹಿರಿಯ ಸಂಶೋಧನಾ ಅಧಿಕಾರಿ ಡಾ.ಕೆ. ಪ್ರೇಮಕುಮಾರ, ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ ಡೊಂಬರಮತ್ತೂರ, ಭೋದಕ ಮತ್ತು ಭೋದಕೇತರ ಸಿಬ್ಬಂದಿ, ವಿಧ್ಯಾರ್ಥಿಗಳು ಹಾಜರಿದ್ದರು. ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net