

ಗುರುಪುರ: ಬಡಗಎಡಪದವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಲಬೆಟ್ಟು ಮತ್ತು ಉರ್ಕಿಯಲ್ಲಿ ಕಳೆದೆರಡು ದಿನಗಳಿಂದ ಕಾಡುಕೋಣವೊಂದು ಗ್ರಾಮಾಂತರ ಪ್ರದೇಶದಲ್ಲಿ ಅಲೆದಾಡುತ್ತಿದೆ.
ಜ.20ರಂದು ತಿಪ್ಲಬೆಟ್ಟುವಿನಲ್ಲಿ ಕಾಣಿಸಿಕೊಂಡಿದ್ದ ಕಾಡುಕೋಣ, ಶುಕ್ರವಾರ ರಾತ್ರಿ ಉರ್ಕಿಯಲ್ಲಿ ತಿರುಗಾಡುತ್ತಿದ್ದು ಕಂಡು ಬಂದಿದೆ. ಈ ಬಗ್ಗೆ ಸ್ಥಳೀಯರು ಪಂಚಾಯತ್ ಮತ್ತು ಅರಣ್ಯ ಇಲಾಖೆಗೆ ಮೌಖಿಕ ದೂರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೂಡುಬಿದಿರೆ ವಲಯ ಉಪಅರಣ್ಯಾಧಿಕಾರಿ ಆಶ್ರಿತ್ ಗಟ್ಟಿ, ಇರುವೈಲು ಅರಣ್ಯ ಪ್ರದೇಶದಲ್ಲಿ ಕಾಡುಕೋಣಗಳಿವೆ. ಇವುಗಳು ಸಾಮಾನ್ಯವಾಗಿ ದೇಹದಲ್ಲಿ ಉಪ್ಪಿನಂಶ ಕಡಿಮೆಯಾದಾಗ ಉಪ್ಪಿನಂಶದ ಆಹಾರ ಹುಡುಕಿಕೊಂಡು ನಾಡಿಗೆ ಇಳಿಯುತ್ತವೆ. ಚಳಿಗಾಲದಲ್ಲಿ ಇರುವೈಲು ಅರಣ್ಯ ವ್ಯಾಪ್ತಿಯ ಕೆಳಪುತ್ತಿಗೆ, ಪುತ್ತಿಗೆ, ಮೂಡುಕೊಣಾಜೆ, ಉರ್ಕಿ, ತಿಪ್ಲಬೆಟ್ಟು ಹಾಗೂ ಇತರೆಡೆ ಕುದುರೆಮುಖ ಅರಣ್ಯ ಪ್ರದೇಶದಿಂದ ಕಾಡುಕೋಣಗಳು ಇಳಿದು ಬರುತ್ತವೆ. ಆಹಾರ ಬೇಟೆಯಾಡಿದ ಬಳಿಕ ಮತ್ತೆ ಅತ್ತ ಸಾಗುತ್ತವೆ. ನಾಗರಿಕ ಪ್ರದೇಶಗಳಲ್ಲಿ ಕಾಡುಕೋಣಗಳ ಹಾವಳಿ ಇದ್ದಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಉರ್ಕಿಯಲ್ಲಿ ಅಡಕೆ ತೋಟದಲ್ಲಿ ಜ. ೨೧ರಂದು ಕಾಡುಕೋಣ ತಿರುಗಾಡುತ್ತಿದ್ದು ಕಂಡು ಬಂದಿದೆ ಎಂಬ ದೂರುಗಳು ಬಂದ ತಕ್ಷಣ ಸಂಜೆ ಹೊತ್ತಿಗೆ ನಿರ್ದಿಷ್ಟ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡಿದ್ದೇವೆ. ನಮಗೆಲ್ಲೂ ಕಾಡುಕೋಣ ಕಾಣಲು ಸಿಗಲಿಲ್ಲ. ಕಾಡುಕೋಣಗಳಿದ್ದರೆ ಜನರು ಭೀತಿಪಡುವ ಅವಶ್ಯಕತೆಯಿಲ್ಲ ಎಂದು ಅರಣ್ಯಾಧಿಕಾರಿ ಜಗರಾಜ್ ತಿಳಿಸಿದರು.