

ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರಾಷ್ಟ ಆರ್ಥಿಕತೆಯಲ್ಲಿ ಇಂಗ್ಲೆಂಡ್ ರಾಷ್ಟ್ರವನ್ನೂ ಹಿಂದಿಕ್ಕಿದ್ದು, ಭವಿಷ್ಯದಲ್ಲಿ ನಂ.೧ ಸ್ಥಾನಕ್ಕೇರಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಜಗದ್ಗುರು ಶ್ರೀ ಕೊಟ್ಟೂರು ಸಂಸ್ಥಾನ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೪ರಲ್ಲಿ ಭಾರತ ಸಾಲದ ಸುಳಿಯಲ್ಲಿ ಸಿಲುಕಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಆರ್ಥಿಕ ಶಿಸ್ತು ಅಳವಡಿಸಿಕೊಂಡಿದೆ. ಹಂತ ಹಂತವಾಗಿ ಸಾಲ ತೀರುವಳಿ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟ ದಿಂದ ಕೆಲ ದೇಶಗಳು ಇನ್ನೂ ಹೊರಗೆ ಬಂದಿಲ್ಲ. ಕೋವಿಡ್ ಸಂಕಷ್ಟದ ಸಮಯದಲ್ಲೂ ಭಾರತ ಆರ್ಥಿಕವಾಗಿ ಎದ್ದು ನಿಲ್ಲುವಂತೆ ಮಾಡಿದ್ದಾರೆ. ಅದರ ಫಲವಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಸದೃಢವಾದ ರಾಷ್ಟ್ರಗಳಲ್ಲಿ ೫ ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ದೇಶವನ್ನೂ ಭಾರತ ಹಿಂದಿಕ್ಕಿದ್ದು, ೫ನೇ ಸ್ಥಾನವನ್ನು ಅಂಕರಿಸಿದೆ. ಮೋದಿ ನಾಯಕತ್ವವನ್ನು ಅನ್ಯ ರಾಷ್ಟçಗಳು ಕೂಡ ಮೆಚ್ಚಿಕೊಂಡಿವೆ. ನೆರೆಯ ಶ್ರೀಲಂಕಾ ಮತ್ತು ಪಾಕಿಸ್ತಾನ ರಾಷ್ಟ್ರಗಳು ಆರ್ಥಿಕತೆಯಲ್ಲಿ ದಿವಾಳಿಯಾಗಿದ್ದು, ದಯನೀಯ ಸ್ಥಿತಿ ತಲುಪಿವೆ. ಸದಾ ಭಾರತಕ್ಕೆ ತೊಂದರೆ ಕೊಡುವ ಪಾಕಿಸ್ತಾನಕ್ಕೆ ಇದೀಗ ಆಸ್ತಿತ್ವದ ಪ್ರಶ್ನೆಯಾಗಿದೆ. ಪಾಕ್ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರು ಕೂಡಾ ಮೋದಿ ಮಾದರಿ ಆಡಳಿತ ಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಇದು ಮೋದಿ ಅವರ ಜನಪರ ಆಡಳಿತಕ್ಕೆ ಸಾಕ್ಷಿ ಎಂದರು.
ಜಮ್ಮುಕಾಶ್ಮೀರದ ೩೭೦ ಕಲಂ ವಿಶೇಷ ಸ್ಥಾನಮಾನ ಹಾಕಿ, ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡಲಾಗಿದೆ. ಅಲ್ಲಿ ಶಾಂತಿ ನೆಲಸುವಂತೆ ಮಾಡಿದೆ. ಉಗ್ರಗಾಮಿಗಳನ್ನು ದಮನ ಮಾಡಲಾಗಿದೆ. ಜಮ್ಮುಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದ್ದು, ಶಾಂತಿ ನೆಲಸಿದೆ. ದೇಶದ ಯಾವುದೇ ಮೂಲೆಯಿಂದಲೂ ಜನರು ಈಗ ಜಮ್ಮುಕಾಶ್ಮೀರಕ್ಕೆ ಹೋಗಬಹುದಾಗಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದ್ದು, ಆರ್ಥಿಕ ಪ್ರಗತಿಗೆ ಕಾರಣವಾಗಿದೆ ಎಂದರು.
ಭವ್ಯ ರಾಮಮಂದಿರ ನಿರ್ಮಾಣ:
ಹಿಂದೆ ಚುನಾವಣಾ ಸಮಯದಲ್ಲಿ ಬಹುಮತದೊಂದಿಗೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಮ ಮಂದಿರ ನಿರ್ಮಾಣ, ಕಾಶ್ಮೀರಕ್ಕೆ ನೀಡಲಾದ ೩೭೦ ವಿಶೇಷ ಸ್ಥಾನಮಾನ ರದ್ದುಗೊಳಿಸಲಾಗುವುದು ಮತ್ತು
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆ ನೀಡಿತ್ತು. ಅದರಂತೆ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಕಾಶ್ಮೀರಕ್ಕೆ ನೀಡಲಾದ ಪ್ರತ್ಯೇಕ ಸ್ಥಾನಮಾನ ರದ್ದುಗೊಳಿಸಲಾಗಿದೆ. ಕಾಶ್ಮೀರ ಮತ್ತು ರಾಮ ಮಂದಿರ ನಿರ್ಮಾಣದ ಬಗ್ಗೆ ಗೇಲಿ ಮಾಡುವವರಿಗೆ ತಿರುಗೇಟು ನೀಡಿದಂತಾಗಿದೆ ಎಂದರು.
ಜತೆಗೆ ದೇಶಕ್ಕೆ ಕಂಟಕವಾಗಿದ್ದ ಭಯೋತ್ಪಾದನೆಯನ್ನು ದಮನಿಸಲಾಗಿದೆ. ಸದ್ಯ ಕಾಶ್ಮೀರ ದಲ್ಲಿ ಕಾನೂನು ಮತ್ತು ಶಾಂತಿ ನೆಲೆಸಿದೆ. ದೇಶದ ಯಾವುದೇ ಮೂಲೆಯ ಜನರು ಕಾಶ್ಮೀರದಲ್ಲಿ ಆಸ್ತಿ ಮಾಡಬಹುದಾಗಿದ್ದು, ಪ್ರವಾಸೋದ್ಯಮವೂ ಉತ್ತೇಜನಗೊಂಡಿದೆ. ಆರ್ಥಿಕ ಪ್ರಗತಿಗೆ ಕಾರಣವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ೫೦೦೦ ಸಾವಿರ ರೂ ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಿಟ್ಟಿದ್ದಾರೆ ಎಂದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜ್, ವಿಭಾಗ ಸಂಘಟನೆ ಕಾರ್ಯದರ್ಶಿ ಸಿದ್ದೇಶ್ ಯಾದವ್, ಮಾದ್ಯಮ ರಾಜ್ಯ ಸಮಿತಿ ಸದಸ್ಯ ವೆಂಕಟ ಮಾಲಪಾಟಿ, ಮಾದ್ಯಮ ಸಂಚಾಲಕ ಸತ್ಯನಾರಾಯಣ ಇತರರಿದ್ದರು.