ಭಾರತೀಯ ಸಂಸ್ಕೃತಿ ಪಸರಿಸುವಲ್ಲಿ ಸ್ತ್ರೀಯರ ಪಾತ್ರ ನಿರ್ಣಾಯಕ ರಾಮಕೃಷ್ಣ ಮಠದ ಶಕ್ತಿ ವಿಚಾರ ಸಂಕಿರಣದಲ್ಲಿ ಸ್ವಾಮಿನಿ ಮಂಗಳಾಮೃತ ಪ್ರಾಣಾ

mng--13 sep Ramakrishna mata Shakthi
Published on

ಮಂಗಳೂರು : ಭಾರತೀಯ ಸಂಸ್ಕೃತಿ ಪಸರಿಸುವಲ್ಲಿ ಸ್ತ್ರೀಯರ ಪಾತ್ರ ನಿರ್ಣಾಯಕ. ದೇಶ ಕಟ್ಟುವಲ್ಲಿ ಸ್ತ್ರೀಯರು ಕುಬ್ಜರಾಗದೆ ಆಲದ ಮರದಂತೆ ವಿಸ್ತಾರವಾಗಿ ಬೆಳೆದು ಸಮಾಜಕ್ಕೆ ಆಸರೆಯಾಗಬೇಕು ಎಂದು ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥೆ ಸ್ವಾಮಿನಿ ಮಂಗಳಾಮೃತ ಪ್ರಾಣಾ ಹೇಳಿದರು.


ಮಂಗಳೂರು ರಾಮಕೃಷ್ಣ ಮಿಷನ್ ಬುಧವಾರ ಆಯೋಜಿಸಿದ ಅಮೃತಕಾಲದಲ್ಲಿ ನಾರೀ ಶಕ್ತಿಯ ಜಾಗೃತಿ ಪರಿಕಲ್ಪನೆಯಲ್ಲಿ ಮಹಿಳಾ ಸಬಲೀಕರಣ ‘ಶಕ್ತಿ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.


ನಿಷ್ಕಲ್ಮಶ ಪ್ರೀತಿ ಒಂದೇ ಪ್ರಪಂಚದ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸಬಲ್ಲುದು. ಸ್ತ್ರೀಯರ ಬಾಹ್ಯ ಬೆಳವಣಿಗೆಗೆ ಅವರ ಶಿಕ್ಷಣ ಸಹಾಯಕವಾದರೆ, ಆಂತರಿಕ ಬೆಳವಣಿಗೆಗೆ ಮಾತೃತ್ವ ಚಿಂತನೆ ಪೂರಕವಾಗುತ್ತದೆ. ಸ್ತ್ರೀಯರ ಆಂತರ್ಯದ ಬೆಳಕು ಪ್ರಪಂಚವನ್ನು ಬೆಳಗಬಲ್ಲದು ಎಂದರು.


ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರು ದಿಕ್ಸೂಚಿ ಭಾಷಣಗೈದರು. ಕೋಝಿಕೋಡ್ ರಾಮಕೃಷ್ಣ ಮಿಷನ್ ಮುಖ್ಯಸ್ಥ ಸ್ವಾಮಿ ನರಸಿಂಹಾನಂದಜಿ ಉಪಸ್ಥಿತರಿದ್ದರು. ಮೆಸ್ಕಾಂ ಆಡಳಿತ ನಿರ್ದೇಶಕಿ ಡಿ.ಪದ್ಮಾವತಿ, ಮಂಗಳೂರು ಪೊಲೀಸ್ ಕಮಿಷನರೇಟ್ ನ ಸಂಚಾರ ವಿಭಾಗದ ಎಸಿಪಿ ಗೀತಾ ಡಿ. ಕುಲಕರ್ಣಿ ಅತಿಥಿಗಳಾಗಿದ್ದರು. ಈ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಶ್ರಮದ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು.


ಮೊದಲ ಅವಧಿಯಲ್ಲಿ ಕೋಝೀಕೋಡ್ ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿ ನರಸಿಂಹಾನಂದಜಿ ಸ್ವಾಮಿ ‘ವಿವೇಕಾನಂದ ಹಾಗೂ ಸೋದರಿ ನಿವೇದಿತಾ ಅವರ ದೃಷ್ಟಿಯಲ್ಲಿ ಮಹಿಳೆ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಎರಡನೇ ಅವಧಿಯಲ್ಲಿ ಬೆಂಗಳೂರಿನ ಸಾಹಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಅರ್ಚನಾ ತ್ರಿಪಾಠಿ ಅವರು ಮಹಿಳಾ ಸಬಲೀಕರಣ ಮತ್ತು ಸುಸ್ಥಿರ ಜೀವನ ಎಂಬ ವಿಷಯದ ಬಗ್ಗೆ ಮಾತನಾಡಿದರು. ಮೂರನೇ ಅವಧಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಎಸಿಪಿ ಗೀತಾ ಡಿ. ಕುಲಕರ್ಣಿ, ಮಂಗಳೂರಿನ ಚಿರಾಯು ಆಯುರ್ವೇದ ಮತ್ತು ಯೋಗ ಚಿಕಿತ್ಸಾ ಸಂಸ್ಥೆಯ ಡಾ.ಆಶಾಜ್ಯೋತಿ ರೈ ಭಾಗವಹಿಸಿದರು. ಮಂಗಳೂರಿನ ಎಸ್‌ಡಿಎಂ ಸ್ನಾತಕೋತ್ತರ ವ್ಯವಹಾರ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ.ಸೀಮಾ ಎಸ್. ಶೆಣೈ ಸಂವಾದ ನಡೆಸಿಕೊಟ್ಟರು.


ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿ, ರಾಮಕೃಷ್ಣ ಮಿಷನ್ ಮಂಗಳೂರು ಇದರ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪ್ಪಾಡಿ ವಂದಿಸಿದರು. ರಾಮಕೃಷ್ಣ ಮಿಷನ್ ಸ್ವಚ್ಛ ಮನಸ್ಸು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ರೆಜಿನಾ ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು. 15ಕ್ಕೂ ಹೆಚ್ಚು ಕಾಲೇಜಿನ 600 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net