

ವಿಜಯಪುರ: ಭಾರತೀಯ ಸಂಸ್ಕೃತಿ ಸುಂದರ ಮತ್ತು ಪವಿತ್ರ. ಅದರ ಉಳಿವಿಗಾಗಿ ಹೃದಯವಂತ ಮಕ್ಕಳು ಬೇಕಾಗಿದೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.
ನಗರದ ಶ್ರೀಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆರಂಭಗೊಂಡ ಭಾರತೀಯ ಕೃಷಿ ಸಂಸ್ಕೃತಿಯ ವಿಶೇಷ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಮತ್ತು ಜ್ಞಾನ ಎರಡೂ ಬೇರೆ ಬೇರೆ. ಶಿಕ್ಷಣದ ಮೂಲಕ ಮಕ್ಕಳನ್ನು ಜ್ಞಾನವಂತರನ್ನಾಗಿಸಬೇಕಿದೆ. ಈ ನಿಟ್ಟಿನಲ್ಲಿ ಕಾಳಿದಾಸ ಶಿಕ್ಷಣ ಸಂಸ್ಥೆ ಶ್ರಮಿಸುತ್ತಿದ್ದೆ. ಭಾರತೀಯ ಜ್ಞಾನ ಪರಂಪರೆಯನ್ನು ಪಸರಿಸುವ ಮಹತ್ಕಾರ್ಯ ಮಾಡುತ್ತಿದೆ ಎಂದರು.
ಉದ್ಘಾಟನೆ ನೆರವೇರಿಸಿದ ಬೀದರನ ಸಿದ್ದಯ್ಯ ಆಧುನಿಕ ಒಡೆಯರ ಮಾತನಾಡಿ, ಕತ್ತಲಿಂದ ಬೆಳಕಿನಡೆ ಸಾಗಬೇಕಿದೆ. ಸಂಸ್ಕೃತಿಯ ಒಳಗುಟ್ಟು ಇಟ್ಟುಕೊಂಡು ಬೆಳಕಿನ ಶೋಧನೆ ಮಾಡಬೇಕಿದೆ. ಸಂಸ್ಕೃತಿಯು ಪ್ರಕೃತಿಯ ಒಳಗುಟ್ಟಿನ ಅರಿವಾಗಿದೆ. ಶುದ್ಧ ಮನಸ್ಸಿನಿಂದ ಅದು ಪಡೆದುಕೊಳ್ಳುವ ಶಕ್ತಿ ನಮ್ಮಲ್ಲಿ ಬರಬೇಕಿದೆ ಎಂದರು.
ಕಾಳಿದಾಸ ಮೇಘದೂತ ಖಂಡಕಾವ್ಯದ ಉತ್ತರಭಾಗ ವಿವರಿಸಿದ ಪಂ. ಮಧ್ವಾಚಾರ್ಯ ಮೋಕಾಶಿ ಅವರು, ಆಧ್ಯಾತ್ಮಿಕ ಚಿಂತನೆ ಮಾಡುವವರೇ ಶ್ರೇಷ್ಠರು. ಹಣ ಗಳಿಸುವುದೇ ಶಿಕ್ಷಣದ ಧ್ಯೇಯವಾಗಬಾರದು. ಮಾನವೀಯ ಮೌಲ್ಯ ಬೆಳೆಸುವ ಶಿಕ್ಷಣ ಬೇಕಿದೆ. ಅಂಥ ಮೌಲ್ಯಗಳು ಕಾಳಿದಾಸ ಅವರ ಮೇಘದೂತ ಕಾವ್ಯದಲ್ಲಿವೆ ಎಂದರು.
ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಕೃಷ್ಣ ಕಾಖಂಡಕಿ ಮೇಘದೂತ ಖಂಡಕಾವ್ಯದ ಪೂರ್ವಭಾಗದ ಕುರಿತು ಉಪನ್ಯಾಸ ನೀಡಿದರು.
ಸಂಸ್ಥೆಯ ಅಧ್ಯಕ್ಷ ಎಸ್.ಎ. ಜಿದ್ದಿ, ಪ್ರಧಾನ ಕಾರ್ಯದರ್ಶಿ ಅಶೋಕ ಎಸ್. ಜಿದ್ದಿ, ವಿ.ಡಿ. ವಸ್ತ್ರದ, ಡಾ. ಕಂಠೀರವ ಕುಲ್ಲೋಳ್ಳಿ, ಆರ್. ಎಸ್. ವಾಡೇದ ಮತ್ತಿತರರಿದ್ದರು.
ಸಾಹಿತಿ ಸುಭಾಸ ಯಾದವಾಡ ಸ್ವಾಗತಿಸಿದರು. ಜಿ.ಎಚ್.ಮರನೂರ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಿದ್ಧೇಶ್ವರ ದೇವಸ್ಥಾನದಿಂದ ಕಾಳಿದಾಸ, ಭಾವುಸಾಹೇಬ, ರಾಮರಾವ, ರಂಗರಾವ ಮಹಾರಾಜರ ಭಾವಚಿತ್ರಗಳ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು.