ಹಿಂದು ಧರ್ಮದ ತಳಹದಿಯ ಮೇಲೆ ನಿಂತಿದೆ ಭಾರತೀಯ ಸಂಸ್ಕೃತಿ

1000626043
Published on

ಹಿರೀಸಾವೆ: ಭಾರತದ ಸಂಸ್ಕೃತಿ ಸನಾತನ ಹಿಂದು ಧರ್ಮದ ತಳಹದಿಯ ಮೇಲೆ ನಿಂತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹೋಬಳಿಯ ಸೋರೆಕಾಯಿಪುರ ಗ್ರಾಮದಲ್ಲಿ ಜೀರ್ಣೋದ್ಧಾರ ಗೊಂಡಿರುವ ಶ್ರೀ ಮಲ್ಲಿಗಮ್ಮ, ಶ್ರೀ ದುರ್ಗಮ್ಮ, ಶ್ರೀ ಮುನೇಶ್ವರ ಹಾಗೂ ಶ್ರೀ ಮಾರಿಯಮ್ಮ ದೇವಿಯ ದೇಗುಲ ಲೋಕಾರ್ಪಣೆ ಹಾಗೂ ದೇವರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ಗ್ರಾಮದಲ್ಲಿಯೂ ದೇಗುಲ ಹಾಗೂ ಶಾಲೆಗಳ ನಿರ್ಮಾಣವಾಗಬೇಕು. ದೇಗುಲದ ಗಂಟೆ ಹಾಗೂ ಶಾಲೆಯ ಬೆಲ್ ಶಬ್ದ ಮೊಳಗಬೇಕು. ಶಾಲೆಯಿಂದ ಶಿಕ್ಷಣ ಮತ್ತು ದೇಗುಲಗಳಿಂದ ಧರ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಯುತ್ತದೆ ಎಂದರು.

ಇತ್ತೀಚಿನ ವರ್ಷಗಳಿಂದ ತಾಲೂಕಿನಾದ್ಯಂತ ಬಹುತೇಕ ದೇಗುಲಗಳು ಜೀರ್ಣೋದ್ಧಾರದೊಂದಿಗೆ ಉದ್ಘಾಟನೆಗೊಂಡಿವೆ. ದೇಗುಲಗಳ ನಿರ್ಮಾಣಕ್ಕೆ ಶಾಸಕರ ನಿಧಿ ಹಾಗೂ ವೈಯಕ್ತಿಕವಾಗಿ ಸಾಕಷ್ಟು ಅನುದಾನ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮಗಳು: ದೇಗುಲಗಳ ಉದ್ಘಾಟನೆ ಹಿನ್ನೆಲೆ ಮುಂಜಾನೆ ಹಸಿರು ಚಪ್ಪರ ಹಾಕಲಾಗಿದ್ದು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮೊದಲಿಗೆ ವಿಘ್ನೇಶ್ವರ ಹಾಗೂ ಗಂಗಾ ಪೂಜೆ ನೆರವೇರಿತು. ನಂತರ ದುರ್ಗಾ ಹೋಮ, ಮೃತ್ಯುಂಜಯ ಹೋಮ, ವೀರಭದ್ರೇಶ್ವರ ಸಮೇತ ವೀರಗಾಸೆಯೊಂದಿಗೆ ಕುಂಭ ಕಳಸರಾಧನೆ ಬಳಿಕ ಮಲ್ಲಿಗೆಮ್ಮ ದೇವಾಲಯ ಪ್ರವೇಶ ಮತ್ತು ಬಿಂಬ ಸೋಮ ಕ್ಷಯನವಾಸ ಹಾಗೂ ವಿವಿಧ ಧಾರ್ಮಿಕ ಪೂಜಾ ವಿಧಾನಗಳು ನೆರವೇರಿದವು. ಕಲಶ ಉತ್ಸವದಲ್ಲಿ ವೀರಗಾಸೆ ಕುಣಿತವು ನೋಡುಗರ ಗಮನಸೆಳೆಯಿತು.

ಗ್ರಾಮ ಪಂಚಾಯಿತಿ ಸದಸ್ಯೆ ರಾಣಿ, ಮಾಜಿ ಅಧ್ಯಕ್ಷ ಚಂದ್ರು, ಜಿಕೆವಿಕೆಯ ನಿವೃತ್ತ ಅಧಿಕಾರಿ ಮತಿಘಟ್ಟ ದೇವರಾಜು, ದೇವಸ್ಥಾನದ ವ್ಯವಸ್ಥಾಪಕರಾದ ಮೇಘಲಮನೆ ನಂಜುಂಡೇಗೌಡ ಮತ್ತು ಪುಟ್ಟಸ್ವಾಮಿಗೌಡ, ಪ್ರಮುಖರಾದ ಚೇತನ್ ಪಟೇಲ್ ಸಣ್ಣತಮ್ಮೇಗೌಡ, ಸೋರೆಕಾಯಿಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net