

ಬೆಳಗಾವಿ: ಇಂದಿನ ಜನಾಂಗ ಉಳಿಯಬೇಕೆಂದರೆ ಭಾರತೀಯ ಸಂಸ್ಕೃತಿ, ಭಾರತೀಯ ಜ್ಞಾನ ಪರಂಪರೆ ಕಾಪಾಡಿಕೊಂಡು ಹೋಗುವುದೊಂದೇ ಮಾರ್ಗ ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಹೇಳಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ 97ನೇ ನಾಡಹಬ್ಬ ಉತ್ಸವ ಸಮಿತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಜಾಗತಿಕ ವಿದ್ಯಮಾನಗಳು ಮತ್ತು ಭಾರತ ವಿಷಯ’ ಕುರಿತು ಮಾತನಾಡಿದರು. ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಾಂತಿಮಂತ್ರ ಪಠಿಸುತ್ತ ಬಂದಿದ್ದೇವೆ. ವಿಶ್ವವೇ ಸುಖವಾಗಿರಲಿ ಎಲ್ಲರಿಗೂ ಮಂಗಲಕರವಾಗಲಿ, ಯಾರಿಗೂ ದುಃಖ, ಸಂಕಟ ಬಾರದಿರಲಿ ಎಂದು ಪ್ರಾರ್ಥಿಸುತ್ತ ಬಂದಿದ್ದೇವೆ. ಇಂತಹ ಆದರ್ಶದ ನೆಲೆಯ ಮೇಲೆ ಭಾರತ ನಿಂತಿದೆ. ಹೀಗಾಗಿ ಭಾರತೀಯ ಸಂಸ್ಕೃತಿ, ಜ್ಞಾನ ಪರಂಪರೆ ಕಾಪಾಡಬೇಕು ಎಂದರು.
ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಭಾರತ ಜಗತ್ತಿಗೆ ಸತ್ಯ, ಶಾಂತಿ ಬೋಧಿಸಿದೆ. ದೇಶದಲ್ಲಿ ಬೇರೆ ಬೇರೆ ಭಾಷೆ, ಜನಾಂಗ, ಧರ್ಮಗಳಿವೆ. ವಿವಿಧತೆಯಲ್ಲಿ ಏಕತೆಯನ್ನು ಕಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಎಚ್.ಬಿ. ರಾಜಶೇಖರ ಮಾತನಾಡಿ, ಭಾರತದ ಸಂಸ್ಕೃತಿ, ಧರ್ಮ, ನಿಲುವು, ಆಧ್ಯಾತ್ಮ, ತತ್ವಗಳು ವಿಶ್ವದಲ್ಲಿಯೇ ಶ್ರೇಷ್ಠ. ಭಾರತದ ನಿಲುವು ತತ್ವಗಳೇ ವಿಶ್ವಕ್ಕೆ ಆಧಾರವಾಗಿವೆ. ಜಾಗತಿಕವಾಗಿ ಚೀನಾ ಮತ್ತು ಪಾಕಿಸ್ತಾನವಷ್ಟೇ ನಮ್ಮ ವಿರುದ್ಧವಾಗಿದ್ದು ಉಳಿದೆಲ್ಲ ದೇಶಗಳು ಸ್ನೇಹಭಾವವನ್ನೇ ಹೊಂದಿವೆ ಎಂದರು.
ಜಯಶ್ರೀ ಮಾಳಗಿ, ಆರ್.ಪಿ. ಪಾಟೀಲ, ಸೋಮಲಿಂಗ ಮಾವಿನಕಟ್ಟಿ, ಡಾ. ಟಿ.ಜಿ. ಸಾಂಬ್ರೇಕರ, ರಾಜು ಪದ್ಮಣ್ಣವರ, ರಾಜು ಕಣ್ಣಪ್ಪನವರ, ಪ್ರಿಯಾ ಪುರಾಣಿಕ, ಸೋಮಲಿಂಗ ಮಾವಿನಕಟ್ಟೆ ವೇದಿಕೆಯಲ್ಲಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನ್ನಪೂರ್ಣ ಹಿರೇಮಠ ತಂಡದಿಂದ ನೃತ್ಯ ಕಾರ್ಯಕ್ರಮ ಜರುಗಿತು. ಪರಂಪರ ಮಹಿಳಾ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಡಾ. ಸಿ.ಕೆ. ಜೋರಾಪೂರ ಸ್ವಾಗತಿಸಿದರು. ಪ್ರಿಯಾ ಪುರಾಣಿಕ ವಂದಿಸಿದರು.