ಭಾರತೀಯ ಸಂಸ್ಕೃತಿ ಅನುಕರಣೀಯ

Maski history
ಮಸ್ಕಿಯಲ್ಲಿ ಪುರಾತತ್ವ ಸಂಶೋಧನಾ ತಂಡದವರಿಗೆ ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸ್ಟಾೃನ್‌ಫೊರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಆ್ಯಂಡ್ರಿಮ್ ಎಂ.ಬವೆರ್, ಕೆನಡಾದ ಡಾ.ಪೀಟರ್ ಜಿ.ಜೋಹಾನ್ಸನ್, ಪ್ರಾಚಾರ್ಯ ಡಾ.ಚನ್ನಬಸವಯ್ಯ ಹಿರೇಮಠ, ಡಾ.ಬಸವರಾಜ ಕೊಡಗುಂಟಿ, ಡಾ. ಹೇಮಂತ್ ಕಡಾಂಬಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಶ್ರೀನಿವಾಸ ಭೋವಿ, ಬಸವರಾಜ ಭೋವಿ ಇದ್ದಾರೆ.
Published on

ಮಸ್ಕಿ: ಭಾರತದಲ್ಲಿ ಪ್ರಾಗೈತಿಹಾಸಿಕ ಇತಿಹಾಸ, ಜನಜೀವನ, ಸಂಸ್ಕೃತಿ, ಆಹಾರ ಪದ್ಧತಿ ಅನುಕರಣೀಯವಾಗಿದೆ ಎಂದು ಸ್ಟಾೃನ್‌ಫೊರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಆ್ಯಂಡ್ರಿಮ್ ಎಂ.ಬವೆರ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಮಸ್ಕಿ ಪುರಾತತ್ವ ಸಂಶೋಧನಾ ತಂಡದ ಸದಸ್ಯರಿಗೆ ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

15 ವರ್ಷಗಳಿಂದ ಅಮೆರಿಕ, ಕೆನಡಾ ಮತ್ತು ಭಾರತದ ಶಿವನಾಡರ್ ವಿಶ್ವವಿದ್ಯಾಯಲದ ಸಹಯೋಗದಲ್ಲಿ ಭಾರತ ಪುರಾತತ್ವ ಇಲಾಖೆಯಿಂದ ಸರ್ವೇ, ಸಂಶೋಧನೆ ಕೆಲಸ ಮಾಡುತ್ತಿದ್ದು, ಈಗಾಗಲೇ ಈ ಭಾಗದ ಕುರಿತು ಎರಡು ಸಂಶೋಧನಾ ಗ್ರಂಥಗಳನ್ನು ಪ್ರಕಟಸಿಲಾಗಿದೆ ಎಂದು ತಿಳಿಸಿದರು.

ಕೆನಡಾದ ಮ್ಯಾಕ್‌ಗಿಲ್ ವಿವಿಯ ಹಿರಿಯ ಪ್ರಾಧ್ಯಾಪಕ ಡಾ.ಪೀಟರ್ ಜಿ.ಜೋಹಾನ್ಸನ್ ಮಾತನಾಡಿ, 11 ರಿಂದ 14ನೇ ಶತಮಾನದ ವರೆಗಿನ ಮಸ್ಕಿ ಬೆಟ್ಟದ ಸಾಲಿನಲ್ಲಿದ್ದ ಜನವಸತಿ, ಅವರ ಜೀವನ ಶೈಲಿ, ಆಹಾರ ಪದ್ಧತಿ, ಅವರು ಬಳಸುತ್ತಿದ್ದ ಪದಾರ್ಥಗಳನ್ನು ಗುರುತಿಸಲಾಗಿದೆ ಎಂದರು.

ನಿವೃತ್ತ ಪ್ರಾಚಾರ್ಯ ಹಾಗೂ ಸಂಶೋಧಕ ಡಾ.ಚನ್ನಬಸವಯ್ಯ ಹಿರೇಮಠ ಮಾತನಾಡಿ, ಮಸ್ಕಿಯ ಇತಿಹಾಸ ಅಗೆದಷ್ಟೂ ಆಳ ಗೋಚರಿಸ ತೊಡಗಿದೆ. ನೂರಾರು ವರ್ಷಗಳಿಂದ ಇಲ್ಲಿನ ಇತಿಹಾಸದ ಬಗ್ಗೆ ಅನೇಕರು ಸಂಶೋಧನೆ ಮಾಡಿದ್ದಾರೆ. ಇನ್ನೂ ಸಂಶೋಧನೆ ಮಾಡುವಷ್ಟು ವಿಷಯಗಳು ಸಿಗುತ್ತಿರುವುದು ಸಂಶೋಧನಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.

ಕಲಬುರಗಿಯ ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ.ಬಸವರಾಜ ಕೊಡಗುಂಟಿ ಅವರು ಸಂಶೋಧನೆಯ ಮಾನದಂಡಗಳು ಹೇಗಿರುತ್ತವೆ ಎಂಬುದನ್ನು ವಿವರಿಸಿದರು. ಶಿವನಾಡರ್ ವಿವಿಯ ಪ್ರಾಧ್ಯಾಪಕ ಡಾ.ಹೇಮಂತ್ ಕಡಾಂಬಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಶ್ರೀನಿವಾಸ ಭೋವಿ, ಬಸವರಾಜ ಭೋವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net