

ಹೂವಿನಹಡಗಲಿ: ದೇವಸ್ಥಾನ ಹಾಗೂ ಮಠ-ಮಾನ್ಯಗಳಲ್ಲಿ ಜರುಗುವ ಧಾರ್ಮಿಕ ಕಾರ್ಯಗಳು ಗ್ರಾಮೀಣ ಪ್ರದೇಶದ ಸಂಸ್ಕೃತಿಯನ್ನು ಬೆಳೆಸುವುದರ ಜತೆಗೆ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತವೆ ಎಂದು ಹಿರೇಹಡಗಲಿ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಸಣ್ಣ ಹಾಲಸ್ವಾಮೀಜಿ ಹೇಳಿದರು.
ತಾಲೂಕಿನ ಮಾಗಳ ಗ್ರಾಮದಲ್ಲಿ ಕೊಟ್ಟೂರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಸಂಜೆ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದರು. ಇತ್ತೀಚಿಗೆ ಜಾತಿ, ಧರ್ಮ, ಮತಗಳಿಂದಾಗಿ ಭಾವೈಕ್ಯ ಮರೆಯಾಗುತ್ತಿದೆ. ಜಾತ್ರೆ ಹಾಗೂ ಧಾರ್ಮಿಕ ಕಾರ್ಯಗಳಿಂದ ಸಂಘಟಿತರಾಗುವ ಜನರು ಜಾತಿ, ಧರ್ಮ, ಮತ ಮೀರಿದ ಸಂಬಂಧ ಹೊಂದಬೇಕು ಎಂದು ಸಲಹೆ ನೀಡಿದರು.
ಸಂಸ್ಕೃತಿ ಬೆಳೆಸುವಲ್ಲಿ ಭಾರತ ಜಗತ್ತಿಗೆ ಮೊದಲನೆಯ ಸ್ಥಾನದಲ್ಲಿದೆ. ದೇಶದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಹಾಗೂ ಉಡುಗೆ ವಿವಿಧತೆಯಲ್ಲಿ ಏಕತೆ ಸಾರುತ್ತವೆ. ಪ್ರಸ್ತುತ ವಿದೇಶಿ ಸಂಸ್ಕೃತಿ ಅನುಕರಣೆ ಮಾಡುತ್ತ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿಸುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರ ಮೇಲಿದೆ. ರೈತರು ರಾಸಾಯನಿಕ ಮುಕ್ತ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಸಣ್ಣ ಹಾಲಸ್ವಾಮೀಜಿ ಸಲಹೆ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನ ಮಾಡಲಾಯಿತು. ಅಂಗೂರು ಹಿರೇಮಠದ ಶಿವಯೋಗೀಶ್ವರ ಸ್ವಾಮೀಜಿ, ಮುಖ್ಯ ಶಿಕ್ಷಕ ಎಂ.ಜಯಣ್ಣ, ಗ್ರಾಪಂ ಉಪಾಧ್ಯಕ್ಷ ವಿರೂಪಾಕ್ಷಪ್ಪ, ಶಿಕ್ಷಕ ಡಾ.ಪಿ.ಎಂ.ಅನಿಲ್‌ಕುಮಾರ್, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ, ಪ್ರಮುಖರಾದ ಪಕ್ಕೀರಪ್ಪ, ವೀರಣ್ಣ, ಮಂಜುನಾಥ ಇತರರಿದ್ದರು.