

ಚಿತ್ರದುರ್ಗ: ಕಾಯಕವೇ ಕೈಲಾಸ, ದಾಸೋಹವೇ ದೇವ ಧಾಮ, ಅನ್ನ ದಾಸೋಹ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವೆಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಭಾರತೀಯ ರೈಲ್ವೆ ಮಂಡಳಿ ಮಾಜಿ ಸದಸ್ಯ ಡಾ.ಕೆ.ವಿ. ಸಿದ್ದರಾಜು ಕುಟುಂಬ ವರ್ಗ ನಗರದ ಎಸ್‌ಜೆಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ ಅನ್ನದಾಸೋಹದ ಕೈಂಕರ್ಯ ನೆರವೇರಿಸಿ ಶ್ರೀಗಳು ಮಾತನಾಡಿದರು.
ಶ್ರೇಷ್ಠವಾದ ಅನ ್ನದಾನದ ಮಹತ್ವವನ್ನು ಸಿದ್ದರಾಜು ಅರಿತಿದ್ದಾರೆ. ತುತ್ತು ಅನ್ನಕ್ಕೆ ಪರದಾಡುವ ಜನರಿಗೆ ಅನ್ನವೇ ದೇವರಾಗಿದೆ. ಆಹಾರದ ಹಾಗೆಯೇ ನೀರು ಕೂಡ ಜೀವಕ್ಕೆ ತುಂಬಾ ಮುಖ್ಯ. ಒಂದೊಂದು ಅಗುಳಿನ ಮೇಲೂ ತಿನ್ನುವವರ ಹೆಸರು ಇರುತ್ತದೆ ಎಂಬ ಮಾತು ಸಾಮಾನ್ಯವಾಗಿದೆ ಎಂದರು.
ಅಕ್ಕಿ ಉಳಿದರೆ ನಾಳೆ ಅನ್ನ ಮಾಡಬಹುದು. ಅನ್ನ ಉಳಿದರೆ ಅದು ವ್ಯರ್ಥವಾಗುತ್ತದೆ. ನಾಲ್ಕು ಅಗುಳು ಕಡಿಮೆ ತಿಂದರೂ ಪರವಾಗಿಲ್ಲ, ಹತ್ತು ಅಗುಳು ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಗೀತಾ ಸಿದ್ದರಾಜು, ಶಾಂತರಾಮು, ನಾಗರಾಜು, ಚಂದ್ರಶೇಖರ್, ಗೆರಗುಂಟೆ ಪಾಳ್ಯ ಸಿದ್ದರಾಜು, ರಾಘವೇಂದ್ರ, ಶ್ರೀಧರ ಉಪಸ್ಥಿತರಿದ್ದರು.