

ಮೂಡಿಗೆರೆ: ಅನಾದಿ ಕಾಲದಿಂದಲೂ ಭಾರತೀಯ ಪರಂಪರೆ ಗೋವುಗಳ ಆಧಾರಿತ ಕೃಷಿ ಸಂಸ್ಕೃತಿಯೊಂದಿಗೆ ಬೆಳೆದು ಬಂದಿದ್ದು, ಪಶುಪಾಲನೆ ಮತ್ತು ಕೃಷಿ ಒಂದಕ್ಕೊಂದು ಪೂರಕವಾಗಿ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ ಎಂದು ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಹೇಳಿದರು.
ಹ್ಯಾರಗುಡ್ಡೆ ಗ್ರಾಮದಲ್ಲಿ ನಿವೃತ್ತ ಇಂಜಿನಿಯರ್ ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಜಗದೀಶ್ ಅಸೋಷಿಯೇಟ್ಸ್ ಸಂಸ್ಥೆಯಿಂದ ನೂತನವಾಗಿ ಪ್ರಾರಂಭಿಸುತ್ತಿರುವ ಗೋಶಾಲೆ ಉದ್ಘಾಟಿಸಿ ಮಾತನಾಡಿ, ಕ್ರಮೇಣವಾಗಿ ದೇಶದಲ್ಲಿ ಪಶುಪಾಲನೆ ಮತ್ತು ಕೃಷಿಯಿಂದ ಜನ ದೂರ ಸರಿಯುತ್ತಿರುವುದು ಇಂದಿನ ನಮ್ಮ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ದೇಶದ ಹೆಮ್ಮೆಯ ಗೋ ಸಂಸ್ಕೃತಿ ಪುನರುತ್ಥಾನದ ಕಡೆಗೆ ಗಮನಹರಿಸಬೇಕು ಎಂದರು.
ದೇಶಿ ಗೋವಿನ ತಳಿಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ವಿದೇಶಿ ತಳಿ ರಾಸುಗಳ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ. ಆರೋಗ್ಯಕ್ಕೆ ಪೂರಕವಾದ ಹಾಲು ನೀಡುವ ನಮ್ಮ ದೇಶಿಯ ಗೋ ತಳಿಗಳ ಸಾಕಾಣಿಕೆ ಮತ್ತು ಅಭಿವೃದ್ಧಿ ಕಡೆಗೆ ಗಮನಹರಿಸ ಬೇಕಿದೆ. ಹ್ಯಾರಗುಡ್ಡೆ ಗ್ರಾಮದ ಶಿವಪ್ರಕಾಶ್ ಕುಟುಂಬದವರು ಗೋಶಾಲೆ ಪ್ರಾರಂಭಿಸಿರುವುದು ಮತ್ತು ಸ್ಪೈಷಸ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವುದು ಮಾದರಿ ಕಾರ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹೆಚ್.ಬಿ.ಶಿವಣ್ಣ, ಸಾಹಿತಿ ಹಳೇಕೋಟೆ ರಮೇಶ್, ಡಾ. ಕುಮಾರ್, ಗೃಹಮಂಡಳಿ ಮಾಜಿ ಅಧ್ಯಕ್ಷ ಜಿ.ಹೆಚ್. ಹಾಲಪ್ಪಗೌಡ, ಮುಖಂಡರಾದ ಬಿ.ಕೆ.ಲಕ್ಷ್ಮಣ ಕುಮಾರ್ ಇತರರಿದ್ದರು.