ಕಾಡುಕೋಣಗಳ ಹಾವಳಿಗೆ ರೈತ ಕಂಗಾಲು: ಹಿಂಡು ಹಿಂಡಾಗಿ ದಾಳಿ ನಡೆಸಿ ಪೈರು ನಾಶ

batta
Published on

ಕೊಕ್ಕರ್ಣೆ: ಕೊಕ್ಕರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈದೆಬೆಟ್ಟು, ಕುಂಜೂರು, ಕಲ್ಗೋಳಿ, ಒಡ್ಡಂಬೆಟ್ಟು ಮುಂತಾದ ಗ್ರಾಮೀಣ ಭಾಗಗಳಲ್ಲಿ ರೈತರು ಹಲವು ಕಷ್ಟನಷ್ಟಗಳ ಈ ಬಾರಿ ಭತ್ತ ನಾಟಿ ಮಾಡಿದ್ದರು. ಆದರೆ ಭಾನುವಾರದಿಂದ ರಾತ್ರಿ ಕಾಡುಕೋಣಗಳ ಹಿಂಡು ದಾಳಿ ಮಾಡಿ 25 ಎಕರೆಗೂ ಅಧಿಕ ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಪೈರುಗಳನ್ನು ತಿಂದು, ತುಳಿದು ಸಂಪೂರ್ಣಹಾಳು ಮಾಡಿದೆ.

ಬೇಲಿ ಹಾರಿ, ಕೆಡವಿ ಕಾಡುಕೋಣಗಳ ಹಿಂಡು ಗದ್ದೆಗಳಿಗೆ ಪ್ರವೇಶಿಸಿ ಭತ್ತದ ಪೈರುಗಳನ್ನು ತಿಂದು ಇಡೀ ಗದ್ದೆಯನ್ನು ಹಾಳುಗೆಡವಿದೆ. ಬೈದೆಬೆಟ್ಟು ಕೃಷಿಕರಾದ ಪ್ರಭಾಕರ ಶೆಟ್ಟಿ, ಭಾಸ್ಕರ ಶೆಟ್ಟಿ, ಜಯರಾಮ ಪೂಜಾರಿ, ಆನಂದ ಪೂಜಾರಿ, ಮಂಜು ಪೂಜಾರಿ, ರಾಜೇಶ್ ಪೂಜಾರಿ, ಜೀವನ್ ಪೂಜಾರಿ, ಸಂಜೀವ ಮೊಗವೀರ, ವಸಂತ ಪೂಜಾರಿ ಕೆರೆಮನೆ, ಬಾಬು ಪೂಜಾರಿ, ಅಶೋಕ್ ಪೂಜಾರಿ, ಸಂತೋಷ್ ಪೂಜಾರಿ, ಮನೋಜ್ ಪೂಜಾರಿ, ವಿಘ್ನೇಶ್ ಆಚಾರ್ ಅವರ ಗದ್ದೆಗಳಿಗೆ ಹಿಂಡು ಹಿಂಡಾಗಿ ರಾತ್ರಿ ವೇಳೆ ದಾಳಿ ನಡೆಸಿವೆ.


ಕೃಷಿಯತ್ತ ಒಲವು ಕಡಿಮೆಯಾಗುತ್ತಿರುವ ನಡುವೆಯೂ ಕೆಲವು ರೈತರು ತಮ್ಮ ಜಮೀನುಗಳನ್ನು ಹಡೀಲು ಬಿಡದೆ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದರು. ಬೆಳೆಗಳನ್ನು ರಕ್ಷಿಸಲು ಬೆದರು ಬೊಂಬೆ, ತೂಗು ಜಾಗಟೆ, ಪಟಾಕಿ, ಹಳ್ಳಿಮನೆ ಮುಂತಾದವುಗಳ ಮೊರೆ ಹೋಗಿ ರಕ್ಷಣೆ ಮಾಡುತ್ತಿದ್ದರು. ಆದರೆ ಕಾಲ ಬದಲಾಗುತ್ತಿದ್ದಂತೆ ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿ ದೈನಂದಿನ ಆಹಾರಕ್ಕಾಗಿ ಕೃಷಿ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ, ವನ್ಯಜೀವಿ ಸಂರಕ್ಷಣಾ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಪಂಚಾಯಿತಿ ಮತ್ತು ಜನಪ್ರತಿನಿಧಿಗಳು ರೈತರ ಸಮಸ್ಯೆಯನ್ನು ಅರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.

ರಾತ್ರಿ ವೇಳೆ ಈ ಭಾಗದಲ್ಲಿ ಕಾಡುಕೋಣಗಳ ಹಿಂಡು ರೈತರ ಗದ್ದೆಗಳಿಗೆ ದಾಳಿ ನಡೆಸಿ ಹಾನಿ ಮಾಡಿದೆ. ಇದು ಈ ವರ್ಷದಲ್ಲಿ ಮೂರನೇ ಬಾರಿ ಕೃಷಿ ಭೂಮಿಗೆ ದಾಳಿ ನಡೆಸಿರುವುದು. ರಾತ್ರಿ ರೈತರು ಒಟ್ಟಾಗಿ ಅವುಗಳನ್ನು ಓಡಿಸಲು ಹಲವು ರೀತಿಯ ಶಬ್ದ ಮಾಡುವ ಸಾಧನಗಳನ್ನು ಬಳಸುತ್ತಿದ್ದರೂ ದಾಳಿ ತಪ್ಪಿಲ್ಲ. ಕೃಷಿಗಾಗಿ ಮಾಡಿದ ಖರ್ಚು ಸರ್ಕಾರದಿಂದ ಸಿಗುವ ಪರಿಹಾರ ಮೊತ್ತಕ್ಕಿಂತ ಅಧಿಕವಾಗಿದೆ. ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ಅಧಿಕಗೊಳಿಸಬೇಕು ಮತ್ತು ಕಾಡುಕೋಣಗಳನ್ನು ಅರಣ್ಯ ವಲಯಕ್ಕೆ ಸಾಗಿಸುವ ವ್ಯವಸ್ಥೆ ಮಾಡಲಿ.

ಜೀವನ್ ಪೂಜಾರಿ ಬೈದೆಬೆಟ್ಟು, ಪ್ರಗತಿಪರ ಕೃಷಿಕರು

ಹಾನಿಗೀಡಾದ ಸ್ಥಳಕ್ಕೆ ಭೇಟಿ ನೀಡಿ ಜಿಪಿಎಸ್ ಮಾಡಲಾಗುವುದು. ರೈತರ ಜಮೀನಿನ ದಾಖಲೆ, ಆಧಾರ್ ಕಾರ್ಡು, ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಅರ್ಜಿಯೊಂದಿಗೆ ಅರಣ್ಯ ಇಲಾಖೆಗೆ ನೀಡಿದರೆ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ಮೊತ್ತ ನೀಡಲಾಗುವುದು.
ಪರಶುರಾಮ್, ಅರಣ್ಯ ಇಲಾಖಾ ಸಿಬ್ಬಂದಿ, ಹೆಬ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net