ಭಾರತೀಯ ಕಲೆಗಳು ಕಣ್ಮರೆ ಆಗಬಾರದು: ನಟಿ ಪೂಜಾ ಲೋಕೇಶ್ ಆಶಯ

4
Published on

ಮೈಸೂರು: ಪಾಶ್ಚಿಮಾತ್ಯ ಸಂಸ್ಕೃತಿಯ ಒತ್ತಡಕ್ಕೆ ಸಿಲುಕಿ ಭಾರತೀಯ ಕಲೆಗಳು ಕಣ್ಮರೆ ಆಗಲು ಯುವಜನರು ಆಸ್ಪದ ಕೊಡಬಾರದು ಎಂದು ಖ್ಯಾತ ಚಲನಚಿತ್ರ ಹಾಗೂ ಕಿರುತೆರೆ ನಟಿ ಪೂಜಾ ಲೋಕೇಶ್ ಹೇಳಿದರು.

ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ವತಿಯಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ 2023-24ನೇ ಶೈಕ್ಷಣಿಕ ಸಾಲಿನ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ‘ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಭಾರತ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಖ್ಯಾತಿ ಪಡೆದಿದೆ. ಇಂತಹ ಭವ್ಯ ಪರಂಪರೆಯನ್ನು ಮರೆತು ಪ್ರಸಕ್ತ ಯುವಪೀಳಿಗೆ ಅತ್ಯಾಧುನಿಕ ಸಂಗೀತ, ಪಾಪ್ ಸಾಂಗ್‌ನಂತಹವುಗಳಿಗೆ ಮಾರುಹೋಗುತ್ತಿದ್ದಾರೆ. ಹಾಗಾಗಿ, ನಮ್ಮ ನೃತ್ಯ, ಸಂಗೀತ, ಜಾನಪದಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ವಿದ್ಯಾರ್ಥಿಗಳು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು. ಯಾವ ಭಾಷೆ ಕಲಿತರೂ ಕನ್ನಡತನವನ್ನು ಬಿಟ್ಟುಕೊಡಬಾರದು. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ನಮ್ಮ ಭಾಷೆ ಮತ್ತು ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಲು ಪ್ರಯತ್ನಿಸಬೇಕು ಎಂದರು.

ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಬಹಳ ಮುಖ್ಯ. ಇಂದಿನ ಯುವಕರು ನಾಳೆ ದೊಡ್ಡ ಕಲಾವಿದರಾಗಬಹುದು. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯೂ ಮುಖ್ಯ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಸಂಗೀತ, ಸಾಹಿತ್ಯದ ಕಡೆಯೂ ಗಮನ ನೀಡಬೇಕು ಎಂದರು.

ಸಮಯ ನಿರ್ವಹಣೆ ಮಾಡಿ:

ವಿದ್ಯಾರ್ಥಿ ಜೀವನದಲ್ಲಿ ಸಮಯ ನಿರ್ವಹಣೆ ಮಾಡಬೇಕು. ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಪಠ್ಯ ಮತ್ತು ಪಠ್ಯೇತರ ಬಗ್ಗೆ ಸಮತೋಲನ ಕಾಪಾಡಿಕೊಳ್ಳಬೇಕು. ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ಪೀಕರಿಸಬೇಕು ಎಂದರು.

ಪಠ್ಯೇತರ ಚಟುವಟಿಕೆಗಳು ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುತ್ತವೆ. ಜ್ಞಾಪಕ ಶಕ್ತಿ, ಸಾಮಾನ್ಯ ಜ್ಞಾನ ಬೆಳೆಸುವುದರ ಜತೆಗೆ ಸೃಜನಶೀಲರನ್ನಾಗಿ ಮಾಡುತ್ತವೆ ಎಂದು ಲೋಕನಾಥ್ ಹೇಳಿದರು.

ಖ್ಯಾತ ನಟ ನೀರ್ನಳ್ಳಿ ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಬಿ.ಎಸ್.ಚಂದ್ರಶೇಖರ, ಸಹಾಯಕ ನಿರ್ದೇಶಕಿ ಡಾ.ಎಸ್.ಎನ್.ಸುಷ್ಮಾ ಇದ್ದರು.

ಇದಕ್ಕೂ ಮುನ್ನ ಮಾನಸಗಂಗೋತ್ರಿಯ ದೊಡ್ಡ ಗಡಿಯಾರದಿಂದ ಮಾನವಿಕ ಸಭಾಂಗಣದವರೆಗೆ ವಿವಿಧ ಕಲಾತಂಡಗಳೊಂದಿಗೆ ಗಣ್ಯರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಡೊಳ್ಳು ಕುಣಿತ, ತಮಟೆ, ಯಕ್ಷಗಾನ, ಪೂಜಾ ಕುಣಿತ, ಕಂಸಾಳೆ ಕಲಾತಂಡಗಳು ಸಾಥ್ ನೀಡಿದವು. ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಫೆ.7 ರವರೆಗೆ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net