

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಮಂಗಳೂರಿನಿಂದ ಕಾರವಾರಕ್ಕೆ ತೆರಳುವ ರೈಲ್ವೆ ಹಳಿಗಳನ್ನು ದ್ವಿಪತಗೊಳಿಸುವುದು. ಜತೆಗೆ ಭಾರತೀಯ ರೈಲ್ವೆ ಹಾಗೂ ಕೊಂಕಣ ರೈಲ್ವೆ ವಿಲೀನಗೊಳಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರದ ಮೂಡ್ಲುಕಟ್ಟೆ ರೈಲ್ವೆ ನಿಲ್ದಾಣದಲ್ಲಿ ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರೈಲ್ವೆ ಪ್ಲಾಟ್ಫಾರ್ಮ್ ನೆಲಹಾಸು ನವೀಕರಣ ಮತ್ತು ಮೇಲ್ಛಾವಣಿ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಭಾನುವಾರ ನೆರವೇರಿಸಿ ಮಾತನಾಡಿದರು. ಜತೆಗೆ ಹಂಗಳೂರು ಲಯನ್ಸ್ ಕ್ಲಬ್ನ ಕಾರ್ಯವೈಖರಿ ಕುರಿತು ಮೆಚ್ಚುಗೆ ಸೂಚಿಸಿ ಶುಭಹಾರೈಸಿದರು.
ಲಯನ್ಸ್ ಜಿಲ್ಲೆ 317ಸಿ ಗವರ್ನರ್ ಮೊಹಮ್ಮದ್ ಹನೀಫ್ ಮಾತನಾಡಿ, ಕುಂದಾಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ತೀರ ಹೆಚ್ಚಾಗಿದ್ದು, ರೈಲು ಬೋಗಿಗಳಿಗೆ ಹತ್ತಲು ಮತ್ತು ಇಳಿಯಲು ಬಹಳಷ್ಟು ಅನಾನುಕೂಲವಾಗುತ್ತಿರುವುದನ್ನು ಮನಗಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಲಯನ್ಸ್ ಉಪಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ರೋವನ್ ಡಿಕೋಸ್ತಾ, ಕೊಂಕಣ ರೈಲ್ವೆ ಪ್ರಾದೇಶಿಕ ಅಧಿಕಾರಿ ಆಶಾ ಶೆಟ್ಟಿ, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ವಿವೇಕ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಈಗಾಗಲೇ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜತೆ ವಿಲೀನಗೊಳಿಸುವ ಬಗ್ಗೆ ರೈಲ್ವೆ ಸಚಿವರ ಜತೆಗೆ ಮಾತುಕತೆ ನಡೆಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕೆಲವು ತೀರ್ಮಾನಗಳು ಬಾಕಿ ಇರುವುದರಿಂದ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರ ಮುತ್ತುವರ್ಜಿ ವಹಿಸಿದರೆ ಕರಾವಳಿ ತೀರದ ಜನರಿಗೆ ವಾಣಿಜ್ಯೀಕರಣ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ. - ಕೋಟ ಶ್ರೀನಿವಾಸ ಪೂಜಾರಿ, ಸಂಸದ https://www.vijayavani.net/observation-that-marigudi-work-by-davanagere-devotees https://www.vijayavani.net/gram-panchayat-elections-are-peaceful