ಕೃಷಿ ಇಲ್ಲದ ಭಾರತದ ಕಲ್ಪನೆ ಅಸಾಧ್ಯ

malenadu startup confernece
ಶಿವಮೊಗ್ಗ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಮಲೆನಾಡು ಸ್ಟಾರ್ಟಪ್ ಸಮ್ಮೇಳನವನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಿದರು. ಬಿ.ವೈ.ರಾಘವೇಂದ್ರ, ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಬಿ.ಆರ್.ಸುಭಾಷ್, ಟಿ.ಡಿ.ಮೇಘರಾಜ್ ಇದ್ದರು.
Published on

ಶಿವಮೊಗ್ಗ: ಕೃಷಿ ಇಲ್ಲದ ಭಾರತವನ್ನು ಕಲ್ಪನೆ ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲ ಎಂದು ಕೇಂದ್ರ ಕೃಷಿ, ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

ನಗರದ ಪಿಇಎಸ್‌ನ ಪ್ರೇರಣಾ ಸಭಾಂಗಣದಲ್ಲಿ ಶನಿವಾರ ಅನ್ವೇಷಣಾ ಇನ್ನೋವೇಷನ್ ಆ್ಯಂಡ್ ಎಂಟರ್‌ಫ್ರೀನ್ಯೋರಲ್ ಫೋರಂನಿಂದ ಮಲೆನಾಡು ಸ್ಟಾರ್ಟಪ್ ಸಮ್ಮೇಳನ-2025 ಉದ್ಘಾಟಿಸಿ ಮಾತನಾಡಿದ ಅವರು, ರೈತರ ಸೇವೆ ಮಾಡುವುದು ಸೌಭಾಗ್ಯ, ದೇವರ ಪೂಜೆ ಇದ್ದಂತೆ. ರೈತರು ಬೆವರು ಹರಿಸಿ, ರಕ್ತ ಸುರಿಸುತ್ತಾರೆ. ಹಾಗಾಗಿ ರೈತರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಆರು ಸೂತ್ರಗಳನ್ನು ಹೊಂದಿದೆ ಎಂದರು.

ಮುಖ್ಯವಾಗಿ ರೈತರ ಉತ್ಪಾದನೆ ಹೆಚ್ಚಿಸಲು ಒತ್ತು ನೀಡಲಾಗುತ್ತಿದೆ. ಉತ್ತಮ ಬಿತ್ತನೆ ಬೀಜಗಳ ಅಗತ್ಯವಿದ್ದು 109 ಬಿತ್ತನೆ ತಳಿ(ಬೀಜ)ಗಳನ್ನು ಸಂಶೋಧನೆ ಮಾಡಲಾಗಿದೆ. ಜತೆಗೆ ಉತ್ಪಾದನಾ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ 2 ಲಕ್ಷ ಕೋಟಿ ರೂ. ರಸಗೊಬ್ಬರ ಸಬ್ಸಿಡಿ ಕೊಡುತ್ತಿದೆ ಎಂದರು.

ಬಿಜೆಪಿ ಸರ್ಕಾರದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಕರ್ನಾಟಕದಲ್ಲಿ ಜಾರಿಯಲ್ಲಿತ್ತು. ಇದೀಗ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುತ್ತಿದ್ದ ನಾಲ್ಕು ಸಾವಿರ ರೂ. ಸ್ಥಗಿತಗೊಳಿಸಿದೆ. ಆದರೆ ಮಧ್ಯಪ್ರದೇಶದಲ್ಲಿ ಅದನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವರು ಹೇಳಿದರು. ಸ್ಪ್ರಿಂಕ್ಲರ್, ಜೆಟ್, ಪಾಲಿಹೌಸ್, ಗ್ರೀನ್ ಹೌಸ್ ಸೇರಿ ಅನೇಕ ಸೌಲಭ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ ನಾವು ಕೊಟ್ಟ ಹಣವನ್ನು ಖರ್ಚು ಮಾಡಿಲ್ಲ. ಹಾಗಾಗಿ ರೈತರ ಅನುಕೂಲಕ್ಕಾಗಿ ನೀಡಿರುವ ಅನುದಾನವನ್ನು ಖರ್ಚು ಮಾಡುವಂತೆ ಈ ಸರ್ಕಾರಕ್ಕೆ ಸೂಚನೆ ನೀಡಿದ್ದೇನೆ ಎಂದರು.

ಬಿಎಸ್‌ವೈ ಗುಣಗಾನ ಮಾಡಿದ ಕೇಂದ್ರ ಸಚಿವ

ಆರಂಭದಲ್ಲೇ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗುಣಗಾನ ಮಾಡಿದರು. ಯಡಿಯೂರಪ್ಪ ಅವರು ನಿಜವಾದ ಮಾಸ್ ಲೀಡರ್. ರೈತರಿಗೆ ಹೆಚ್ಚು ಮಹತ್ವ ಕೊಟ್ಟು ಕೆಲಸ ಮಾಡಿದವರು ಅವರು. ಬಿಎಸ್‌ವೈ ಪ್ರೇರಣೆಯಿಂದಲೇ ನಾನಿಂದು ಕೃಷಿ ಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net