2035ಕ್ಕೆ ವಿಶ್ವಗುರುವಾಗಲಿದೆ ಭಾರತ

1
ತುಮಕೂರಿನಲ್ಲಿ ಸಾಹೇ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ವಿವಿಧ ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳೊಂದಿಗೆ ಡಾ.ಜಿ.ಪರಮೇಶ್ವರ, ಸಂಸ್ಥೆಯ ಕನ್ಯಕಾ ಪರಮೇಶ್ವರ, ಸಾಹೇ ವಿವಿ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವ ಡಾ.ಎಂ.ಝೆಡ್​.ಕುರಿಯನ್​, ಕುಲಾಧಿಪತಿಗಳ ಸಲಹೆಗಾರ ಡಾ.ವಿವೇಕ್​ ವೀರಯ್ಯ, ಡಾ.ಎಂ.ಎಸ್​.ರವಿಪ್ರಕಾಶ್​, ಡಾ.ಸಾಣಿಕೊಪ್ಪ, ಡಾ.ಬಿ.ಪ್ರವಿಣ್​ ಕುಡುವ, ಡಾ.ಪ್ರಭಾಕರ್​, ಡಾ.ಸುದೀಪ್​ ಕುಮಾರ್​ ಇತರರು ಇದ್ದರು.
Published on

ಘಟಿಕೋತ್ಸವದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಸೀತಾರಾಮ್​ ಹೇಳಿಕೆ

ತುಮಕೂರು: ಭಾರತ ವಿಶ್ವದಲ್ಲಿಯೇ ಅತಿ ದೊಡ್ಡ ಸ್ಮಾರ್ಟ್​ ೋನ್​ ಉತ್ಪಾದನಾ ದೇಶವಾಗಿ ಹೊರಹೊಮ್ಮಿದೆ. ಶೇ.40 ಯುಪಿಐ ವಹಿವಾಟು ಇದರಿಂದ ಹೆಚ್ಚಾಗಿದ್ದು, ದೇಶದ ಮೂಲೆ ಮೂಲೆಗಳಲ್ಲಿ ಟಿಜಿಟಲ್​ ವಹಿವಾಟು ನಡೆಸುತ್ತಿರುವುದರಿಂದ ಹಣಕಾಸಿನ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್​ ಹೇಳಿದರು.

ನಗರದ ಶ್ರೀ ಸಿದ್ಧಾರ್ಥ ವೈದ್ಯಕಿಯ ಕಾಲೇಜು ಎಚ್​.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾಹೇ (ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್​ ಹೈಯರ್​ ಎಜುಕೇಷನ್​) ವಿಶ್ವ ವಿದ್ಯಾಲಯದ 13ನೇ ಘಟಿಕೋತ್ಸವದ ಭಾಷಣ ಮಾಡಿದ ಅವರು, ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ವೈದ್ಯಕಿಯ, ಇಂಜಿನಿಯರಿಂಗ್​, ಎಂಸಿಎ ಸೇರಿ ವಿವಿಧ ಕೋರ್ಸ್​ಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿಯೂ ಪರಿಣಿತರಾಗಿರುವುದು ಅವಶ್ಯವಾಗಿದೆ ಎಂದರು.

ತಂತ್ರಜ್ಞಾನದ ಸಹಾಯದಿಂದ ಪ್ರತಿಯೊಂದು ಮೂಲೆಯಲ್ಲಿಯೂ ಯುಪಿಐ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಯುಪಿಐ ವಹಿವಾಟು, ಅತಿ ಹೆಚ್ಚು ಮೊಬೈಲ್​, ಇಂಟರ್​ನೆಟ್​ ಬಳಕೆದಾರರು, ಹಣಕಾಸು ಸಾಕ್ಷರತೆ ಈ ಎಲ್ಲ ಕಾರಣಗಳಿಂದ 2035ರ ವೇಳೆಗೆ ಭಾರತ ವಿಶ್ವಗುರುವಾಗಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೌಶಲ ಹೊಂದಿದವರಿಗೆ ಉದ್ಯೋಗಾವಕಾಶ ಹೆಚ್ಚಿದ್ದು, ಹೊಸ ಆವಿಷ್ಕಾರಗಳಿಗೆ ಇದು ಮುನ್ನುಡಿಯಾಗಲಿದೆ ಎಂದರು. ಶೇ.40 ಕೋರ್ಸ್​ಗಳು ಆನ್​ಲೈನ್​ ಮತ್ತು ಡಿಜಿಟಲ್​ ಕಲಿಕೆ ಆಧಾರಿತವಾಗಿದ್ದು, ಶಿಕ್ಷಕರು ಕೂಡ ಅದಕ್ಕೆ ಹೊಂದಿಕೊಂಡು ಬದಲಾಗಬೇಕಿದೆ. ತಂತ್ರಜ್ಞಾನ ಅತಿ ವೇಗವಾಗಿ ಬೆಳೆಯುತ್ತಿರುವು ದರಿಂದ ಶಿಕ್ಷಕರು ಸಹ ಗೊತ್ತಿಲ್ಲದ ವಿಷಯ

ಕಲಿಯುವ ಪ್ರಯತ್ನ ಮಾಡಬೇಕು ಎಂದರು.

ಭಾರತದಲ್ಲಿ 4.33 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದು, ಅದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. ಇತ್ತೀಚೆಗೆ ಮನೆಯಲ್ಲಿಯೇ ಕುಳಿತು ಆರ್ಥಿಕ ವ್ಯವಹಾರ ನಡೆಸುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಭಾರತ ಮುಂದಿದೆ. ಇಸ್ರೋ ಸಂಸ್ಥೆಯ ಚಂದ್ರಯಾನ ಉಡಾವಣೆಯಲ್ಲಿ ಶೇ.30ರಷ್ಟಿದ್ದ ಮಹಿಳಾ ಇಂಜಿನಿಯರ್​ಗಳ ಪಾತ್ರ ಪ್ರಮುಖವಾಗಿತ್ತು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಇಂಜಿನಿಯರಿಂಗ್​ ಮತ್ತು ವೈದ್ಯಕಿಯ ಕೋರ್ಸ್​ ಗಳನ್ನು ಹೊಂದಿದ್ದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಬಹುಶಿಸ್ತಿನ ಕೋರ್ಸ್​ಗಳನ್ನು ಅಳವಡಿಸಿಕೊಳ್ಳುವುದರಿಂದ ಹೊಸ ಆವಿಷ್ಕಾರ ಹೊರ ತರಬಹುದು ಎಂದರು.

ಗೌರವ ಡಾಕ್ಟರೇಟ್​ ಸ್ವೀಕರಿಸಿ ಮಾತನಾಡಿದ ಮಾರ್ಗರೇಟ್​ ಆಳ್ವ, ರಾಜ್ಯಾದ್ಯಂತ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಪಸರಿಸಲಿ, 100ರ ಗಡಿ ದಾಟಿ ಮುನ್ನಡೆಯಲಿ. ಇದೇ ಸಂದರ್ಭದಲ್ಲಿ ಅವರು ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸ್ವಾ ಅನುಭವದ ಮೂಲಕ ವೃತ್ತಿ ಬದುಕಿನಲ್ಲಿ ವಿದ್ಯಾರ್ಥಿಗಳು ಹೇಗೆ ಇರಬೇಕು ಎಂದು ಸಲಹೆ ನೀಡಿದರು.

ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ಗೃಹಸಚಿವ ಡಾ.ಜಿ.ಪರಮೇಶ್ವರ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಗೌಪ್ಯತೆಯನ್ನು ಬೋಧಿಸಿದರು. ಸಾಹೇ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ವಿಶ್ವವಿದ್ಯಾಲಯದ ಸಂಕ್ಷಿಪ್ತ ವರದಿ ಮಂಡಿಸಿದರು.

ಪದವಿ ಪ್ರಮಾಣ ಪತ್ರ ಪಡೆಯಲು ಆಗಮಿಸಿದ್ದ ವೈದ್ಯಕಿಯ, ಇಂಜಿನಿಯರಿಂಗ್​, ಎಂಸಿಎ ಸೇರಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಸಮಾರಂಭದಲ್ಲಿ ಎಸ್​ಎಸ್​ಐಟಿ ಪ್ರಾಚಾರ್ಯ ಡಾ.ಎಂ.ಎಸ್​.ರವಿಪ್ರಕಾಶ್​, ಸಾಹೇ ವಿವಿ ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ.ಗುರುಶಂಕರ್, ವೈದ್ಯಕಿಯ ಕಾಲೇಜು ಪ್ರಾಚಾರ್ಯ ಡಾ.ಸಾಣಿಕೊಪ್ಪ, ಡೆಂಟಲ್​ ಕಾಲೇಜು ಪ್ರಾಚಾರ್ಯ ಡಾ.ಬಿ.ಪ್ರವಿಣ್​ ಕುಡುವ, ವೈದ್ಯಕಿಯ ಕಾಲೇಜು ಉಪ ಪ್ರಾಚಾರ್ಯ ಡಾ.ಜಿ.ಎನ್​. ಪ್ರಭಾಕರ್​, ಉಪ ಕುಲಸಚಿವ ಡಾ.ಸುದೀಪ್​ ಕುಮಾರ್​ ಇತರರು ಇದ್ದರು.

ಆಳ್ವಗೆ ಗೌರವ ಡಾಕ್ಟರೇಟ್,​ 876 ವಿದ್ಯಾರ್ಥಿಗಳಿಗೆ ಪದವಿ

ಘಟಿಕೋತ್ಸವದಲ್ಲಿ ಇಂಜಿನಿಯರಿಂಗ್​, ವೈದ್ಯಕಿಯ, ದಂತ ವೈದ್ಯಕಿಯ, ಪಿಎಚ್​.ಡಿ ಸೇರಿ ಒಟ್ಟು 876 ವಿದ್ಯಾರ್ಥಿಗಳಿಗೆ ವಿವಿಯ ಕುಲಾಧಿಪತಿ ಡಾ.ಜಿ.ಪರಮೇಶ್ವ ಪದವಿ ಪ್ರದಾನ ಮಾಡಿದರು. ಇಂಜಿನಿಯರಿಂಗ್​ 6, ವೈದ್ಯಕಿಯದಲ್ಲಿ 1, ದಂತ ವೈದ್ಯಕಿಯ 2, ಎಂಸಿಎ 1 ಸೇರಿ ಒಟ್ಟು 10 ಮಂದಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. 13ನೇ ಸಾಹೇ ವಿವಿ ಘಟಿಕೋತ್ಸವದ ಕೇಂದ್ರ ಬಿಂದುವಾಗಿದ್ದ ಮಾಜಿ ಕೇಂದ್ರ ಸಚಿವರು ಹಾಗೂ ನಿಕಟಪೂರ್ವ ರಾಜ್ಯಪಾಲರು ಆದ ಮಾರ್ಗರೆಟ್​ ಆಳ್ವ ಅವರಿಗೆ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ ಗೌರವ ಡಾಕ್ಟರೇಟ್​ ಪದವಿ ಪ್ರದಾನ ಮಾಡಿ ಗೌರವಿಸಿದರು. ಡಾಕ್ಟರೇಟ್​ ಪದವಿ -24, ಇಂಜಿನಿಯರಿಂಗ್​- 601, ವೈದ್ಯಕಿಯ -147, ದಂತ ವೈದ್ಯಕಿಯ- 49 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಇಂಜಿನಿಯರಿಂಗ್​- 1, ವೈದ್ಯಕಿಯ- 1 ಹಾಗೂ ದಂತ ವೈದ್ಯಕಿಯ- 1 ವಿದ್ಯಾರ್ಥಿಗೆ ಪದವಿ ಪ್ರದಾನ ಮಾಡಲಾಯಿತು.

ಐಎಸ್​ ವಿಭಾಗದಲ್ಲಿ ಬೆಸ್ಟ್​ ಔಟ್​ ಗೋಯಿಂಗ್​ ಸ್ಟೂಡೆಂಟ್​ ಆಗಿ ಹೊರಹೊಮ್ಮಿದ್ದು ಮತ್ತು ಈ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವುದು ಖುಷಿ ನೀಡಿದೆ. ಸಿದ್ಧಾರ್ಥ ಕಾಲೇಜು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡುವುದರ ಮೂಲಕ ಪ್ರೋತ್ಸಾಹಿಸಿದ ಕಾರಣ ಚಿನ್ನದ ಪದಕ ಪಡೆಯಲು ಸಾಧ್ಯವಾಗಿದೆ. ನನ್ನೆಲ್ಲಾ ಅಧ್ಯಾಪಕರಿಗೂ, ತಂದೆ&ತಾಯಿಗಳಿಗೂ, ಸ್ನೇಹಿತರಿಗೂ ಧನ್ಯವಾದ ತಿಳಿಸುತ್ತೇನೆ. - ಕೌಶಿಕ್​ ರ್ಯಾಂಕ್​ ವಿಜೇತ ಐಎಸ್​ ವಿಭಾಗ, ಎಸ್​ಎಸ್​ಐಟಿ ಎಂಬಿಬಿಎಸ್​ ವಿದ್ಯಾರ್ಥಿಯಾಗಿ ಚಿನ್ನದ ಪದಕ ಪಡೆದಿರುವುದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದೆ. ಇದು ನನ್ನ ತಂದೆ-ತಾಯಿಗಳ ಆಶೀರ್ವಾದದ ಪ್ರತಿಫಲ. - ರಾಹುಲ್​ ರ್ಯಾಂಕ್​ ವಿಜೇತ ವಿದ್ಯಾರ್ಥಿ, ವೈದ್ಯಕಿಯ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net