

ಮೈಸೂರು: ಬಿಜೆಪಿಯಿಂದ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನಕ್ಕೆ ಮಂಗಳವಾರ ನಗರದಲ್ಲಿ ಚಾಲನೆ ನೀಡಲಾಯಿತು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರವ್ಯಾಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಯುವಕರು, ಯುವತಿಯರು ಈ ದೇಶದ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಒಪ್ಪಿ ಕೋಟ್ಯಂತರ ಜನರು ಬೆಂಬಲ ನೀಡುತ್ತಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ದೇಶ ಬಲಿಷ್ಠ ಭಾರತವಾಗಲಿದ್ದು, ಈ ಸಂದರ್ಭದಲ್ಲಿ ಸದಸ್ಯತ್ವ ಸಂಖ್ಯೆಯು ಕಳೆದ ಬಾರಿಗಿಂತ ಹೆಚ್ಚಾಗಬೇಕು. ಹಾಗೆಯೇ ಮೈಸೂರು ಜಿಲ್ಲೆಯಲ್ಲಿ ನಮ್ಮ ಪಕ್ಷ ಇನ್ನಷ್ಟು ಗಟ್ಟಿಯಾಗಬೇಕು. ಪ್ರತಿ ಕ್ಷೇತ್ರವಾರು ತಾವೇ ಖುದ್ದಾಗಿ ಬೂತ್‌ಗಳಿಗೆ ಭೇಟಿ ನೀಡಿ, ಸದಸ್ಯತ್ವ ಅಭಿಯಾನ ಗಮನಿಸುವ ಜತೆಗೆ ಕಾರ್ಯಕರ್ತನಂತೆ ತಮ್ಮೊಟ್ಟಿಗೆ ಕೆಲಸ ಮಾಡಿ ಪಕ್ಷ ಸಂಘಟಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಮಾತನಾಡಿ, ಈ ಹಿಂದೆ ನಾನು ಸದಸ್ಯತ್ವ ಅಭಿಯಾನದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೆ. ಇಡೀ ರಾಷ್ಟ್ರದಲ್ಲಿ 12 ಕೋಟಿ ಸದಸ್ಯತ್ವ ಮಾಡುವುದರೊಂದಿಗೆ ದೇಶದ ಮೂಲೆ, ಮೂಲೆಯಲ್ಲೂ ಕಾರ್ಯಕರ್ತರೊಟ್ಟಿಗೆ ಪಕ್ಷ ಸಂಘಟಿಸುವತ್ತ ಸದಸ್ಯತ್ವ ಅಭಿಯಾನವು ಸಹಕಾರಿಯಾಗಿತ್ತು ಎಂದರು.
ಸದಸ್ಯತ್ವ ಅಭಿಯಾನದ ಸದಸ್ಯ ರಾಬಿನ್ ದೇವಯ್ಯ ಮಾತನಾಡಿ, ಗ್ರಾಮಾಂತರ ವಿಭಾಗದ ಪ್ರತಿ ಬೂತನಲ್ಲಿಯೂ ಸದಸ್ಯರು 8800002024 ಟೋಲ್ ಫ್ರೀ ನಂಬರ್‌ಗೆ ಮಿಸ್‌ಕಾಲ್ ಕೊಡುವುದರ ಮೂಲಕ ಸದಸ್ಯತ್ವ ಹೊಂದಬೇಕು. ಪ್ರತಿ ಬೂತ್ ನಿಂದ ಕನಿಷ್ಠ 300 ಸದಸ್ಯರು ಮಿಸ್ ಕಾಲ್ ಕೊಡುವುದರ ಮೂಲಕ ನೋಂದಾಯಿತರಾಗಬೇಕು. ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಯುವಕರನ್ನು ಒಟ್ಟುಗೂಡಿಸಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಕೋರಿದರು.
ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತನಾಡಿ, ಸದಸ್ಯತ್ವ ಅಭಿಯಾನದ ಬಗ್ಗೆ ಈಗಾಗಲೇ ನಮ್ಮ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿ ಜಿಲ್ಲೆ, ಪ್ರತಿ ತಾಲೂಕು ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಅವರ ಮಾರ್ಗದರ್ಶನದಂತೆ ನಾವೆಲ್ಲರೂ ಪ್ರತಿ ಬೂತ್‌ನಲ್ಲಿ ಕಾರ್ಯಕರ್ತ ಮಿತ್ರರೊಟ್ಟಿಗೆ ಕೆಲಸ ಮಾಡುತ್ತಿದ್ದು, ಈ ಕಾರ್ಯಾಗಾರವನ್ನು ಯಶಸ್ವಿ ಮಾಡುವವರೆಗೂ ಶ್ರಮಿಸಲಾಗುವುದು. ಜಿಲ್ಲೆಯಲ್ಲಿ 1,778 ಬೂತ್‌ಗಳು ಇದ್ದು, ಎಲ್ಲ ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಎಲ್ಲರೂ ಕೂಡ ಈ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಸದಸ್ಯತ್ವ ಅಭಿಯಾನವನ್ನು ಸೆ.2ರಂದು ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲೆಯಲ್ಲಿ 2.15 ಲಕ್ಷ ಸದಸ್ಯತ್ವ ಪೂರೈಸಿದ್ದು, ಅದರಲ್ಲಿ 2,400 ಸಕ್ರಿಯ ಸದಸ್ಯರಿದ್ದಾರೆ. ಈ ಬಾರಿ 5 ಲಕ್ಷ ಸದಸ್ಯರ ನೋಂದಾಯಿಸುವ ಗುರಿ ಇದೆ. ಅದರಲ್ಲಿ ಕನಿಷ್ಠ 5 ಸಾವಿರ ಸಕ್ರಿಯ ಸದಸ್ಯರು ನೋಂದಾಯಿತರಾಬೇಕೆಂಬುವ ನಿರೀಕ್ಷೆ ಇದೆ ಎಂದರು.
ಕಾಂಗ್ರೆಸ್ ಸರ್ಕಾರ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಇಲ್ಲಿಯವರೆಗೂ ತಾವೂ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಉಚಿತ ಯೋಜನೆಯನ್ನೂ ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ನೀಡಲಾಗದೆ ಕಾಂಗ್ರೆಸ್‌ನವರು ವೈಫಲ್ಯ ಕಂಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ನಗರ ಅಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡವಾಡಿ ಮಹೇಶ್, ಕಾರ್ಯಾಲಯ ಕಾರ್ಯದರ್ಶಿ ಪಾಪಣ್ಣ, ಮುಖಂಡರಾದ ಕಿರಣ್ ಜಯರಾಮೇಗೌಡ, ಬಾಲಕೃಷ್ಣ, ಜಿಲ್ಲಾ ಪದಾಧಿಕಾರಿಗಳು, ವಿವಿಧ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಕೋಷ್ಠ ಸಂಚಾಲಕರು ಇತರರು ಇದ್ದರು.