

ಮಡಿಕೇರಿ: ಸ್ವತಂತ್ರ್ಯ ಭಾರತ ಮತ್ತು ಅಮೇರಿಕಾ ನಡುವೆ ೭೫ ವರ್ಷಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಂಬಂಧ ವೃದ್ಧಿಯಾಗುತ್ತಲೇ ಬಂದಿದ್ದು, ಪರಸ್ಪರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಚೆನ್ನೈನಲ್ಲಿರುವ ಅಮೇರಿಕಾ ದೇಶದ ಕೌನ್ಸಲ್ ಜನರಲ್ ಜುಡಿತ್ ರವಿನ್ ಹರ್ಷ ವ್ಯಕ್ತಪಡಿಸಿದರು.
ನಗರದ ನಾರ್ಥ್ ಕೂರ್ಗ್ ಕ್ಲಬ್ ಸಭಾಂಗಣದಲ್ಲಿ ಮರ್ಕೇರಾ ಡೇರಿಯನ್ ಅಸೋಸಿಯೇಷನ್‌ನ ೬೮ನೇ ವಾರ್ಷಿಕ ಸಭೆಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದರು.
ಭಾರತದ ಭವಿಷ್ಯ ಯುವಪೀಳಿಗೆಯನ್ನು ಅವಲಂಭಿಸಿದ್ದು ಭಾರತೀಯ ಯುವಕ, ಯುವತಿಯರು ತಮ್ಮ ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಸಶಕ್ತವಾಗಿ ಮುಂದುವರೆಸಿಕೊಂಡು ಸಾಗುವಲ್ಲಿ ಪ್ರಬಲರಾಗಿದ್ದಾರೆ. ಅಮೇರಿಕಾ-ಭಾರತ ನಡುವಿನ ಸೌಹಾರ್ಧ ಸಂಬಂಧ ಕಳೆದ ೭೫ ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಉತ್ತಮವಾಗಿದೆ. ಭಾರತದ ಲಕ್ಷಾಂತರ ಉದ್ಯೋಗಿಗಳಿಗೆ ಅಮೇರಿಕಾ ಆಶ್ರಯ ನೀಡಿದ್ದರೆ, ಭಾರತ ಕೂಡ ಅಮೇರಿಕಾದ ಅನೇಕ ಪ್ರಮುಖ ಸಂಸ್ಥೆಗಳಿಗೆ ತನ್ನ ದೇಶದಲ್ಲಿ ವಿವಿಧ ವಹಿವಾಟಿಗೆ ಅವಕಾಶ ನೀಡಿ ಸ್ನೇಹದ ಬೆಸುಗೆ ವೃದ್ಧಿಸಿದೆ ಎಂದರು.
ವ್ಯಾಪಾರ, ಉದ್ಯಮ, ಶಿಕ್ಷಣ, ಆರೋಗ್ಯ, ಪರಿಸರ ಮುಂತಾದ ವಿಚಾರಗಳಲ್ಲಿ ಅಮೇರಿಕಾ ಹಾಗೂ ಭಾರತ ಪರಸ್ಪರ ನಿಕಟ ಭಾಂದವ್ಯ ಹೊಂದಿದ್ದು ಹೀಗಾಗಿಯೇ ಎರಡೂ ದೇಶಗಳು ಈ ಕ್ಷೇತ್ರಗಳಲ್ಲಿ ಪರಸ್ಪರ ಹೊಂದಾಣಿಕೆ ಮೂಲಕ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ಅಮೇರಿಕಾದ ರಾಜಕೀಯ ಕ್ಷೇತ್ರದಲ್ಲಿಯೂ ಮಹತ್ವ ಪಡೆದಿದ್ದಾರೆ ಎಂದೂ ಜುಡಿತ್ ನುಡಿದರು.
ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕ್ಯಾಪ್ಟನ್ ಮಲ್ಚೀರ ಎ.ಅಯ್ಯಪ್ಪ ಮಾತನಾಡಿ, ಎರಡೂ ದೇಶಗಳ ಎರಡು ನಗರಗಳಾದ ಮಡಿಕೇರಿ ಹಾಗೂ ಡೇರಿಯನ್ ನಡುವೆ ಪರಸ್ಪರ ಸೌಹಾರ್ಧ ಸಂಬಂಧ ಬೆಸೆಯುವಲ್ಲಿ ಮರ್ಕೇರ ಡೇರಿಯನ್ ಅಸೋಸಿಯೇಷನ್ ಅತ್ಯುತ್ತಮ ಕಾರ್ಯನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಯುವಪೀಳಿಗೆ ಹೆಚ್ಚಿನ ಪಾತ್ರ ವಹಿಸಬೇಕೆಂದು ಕರೆ ನೀಡಿದರು.
ಮರ್ಕೇರಾ ಡೇರಿಯನ್ ಅಸೋಸಿಯೇಷನ್‌ನಲ್ಲಿ ೩೦ ವರ್ಷಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕೂತಂಡ ಪಿ.ಉತ್ತಪ್ಪ ಮಾತನಾಡಿ, ೧೯೫೪ರಲ್ಲಿ ಅಮೇರಿಕಾದ ಡೇರಿಯನ್ ನಗರ ಹಾಗೂ ಭಾರತದ ಮಡಿಕೇರಿ ನಡುವೆ ಪ್ರಾರಂಭವಾದ ಗೆಳೆತನದ ಬೆಸುಗೆ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಈ ಅವಧಿಯಲ್ಲಿ ಎರಡೂ ನಗರಗಳಿಗೆ ಎರಡೂ ದೇಶದ ಪ್ರತಿನಿಧಿಗಳು ಭೇಟಿ ನೀಡಿ ಸ್ನೇಹದ ಸಂಬಂಧ ಬೆಸೆದಿದ್ದಾರೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಮೈಸೂರು ಮಹಾರಾಜರು ಕೂಡ ಡೇರಿಯನ್ ನಗರಕ್ಕೆ ಭೇಟಿ ನೀಡಿ ಕರ್ನಾಟಕದ ಕಂಪನ್ನು ತೋರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮರ್ಕೇರಾ ಡೇರಿಯನ್ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ಮಡಿಕೇರಿಯ ಡಾ.ಅನಿಲ್ ಚಂಗಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಅಸೋಸಿಯೇಷನ್ ಕಾರ್ಯದರ್ಶಿ ಸುನೀಲ್ ಗಣಪತಿ, ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಚೈನ್ನೈನ ಅಮೇರಿಕಾ ರಾಯಭಾರಿ ಕಚೇರಿ ಅಧಿಕಾರಿ ಬಂದಾ ಜಯಕಾಂತ್ ಸೇರಿದಂತೆ ಮರ್ಕೇರಾ ಡೇರಿಯನ್ ಅಸೋಸಿಯೇಷನ್‌ನ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭ ಅಮೇರಿಕಾದ ಕೌನ್ಸಲ್ ಜನರಲ್ ಜುಡಿತ್ ರವಿನ್‌ರವರಿಗೆ ಕೊಡವ ಸಾಂಪ್ರದಾಯಿಕ ತೂಕ್ ಬೊಳ್ ಚ ಕೊಡಗಿನ ಸ್ವಾದಿಷ್ಟ ಕಾಫಿ ಪುಡಿಯನ್ನು ಉಡುಗೊರೆಯಾಗಿ ನೀಡಿದರೆ, ಮರ್ಕೇರಾ ಡೇರಿಯನ್ ಅಸೋಸಿಯೇಷನ್‌ಗೆ ಅಮೇರಿಕಾದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಅವರ ಭಾಷಣದ ಸಂಗ್ರಹದ ಪುಸ್ತಕವನ್ನು ಕೊಡುಗೆಯಾಗಿ ಜುಡಿತ್ ರವಿನ್ ನೀಡಿದರು.