ವಿಶ್ವದಲ್ಲಿ ಭಾರತ ಇಂದು ಸಮರ್ಥ, ಸಮೃದ್ಧವಾದ ದೇಶ

15 ಎಸ್ಕೆಪಿ 1
ಶಿಕಾರಿಪುರದಲ್ಲಿ ಶಾಸಕ ಬಿ.ವೈ.,ವಿಜಯೇಂದ್ರ ಅವರು ನನ್ನ ಮಣ್ಣು ನನ್ನ ದೇಶ ಅಭಿಯಾನದ ನಿಮಿತ್ತ ಮಣ್ಣು ಸಂಗ್ರಹಿಸಿದರು. ಕೆ.ಎಸ್.ಗುರುಮೂರ್ತಿ, ವೀರೇಂದ್ರ ಪಾಟೀಲ್, ನಾಗರಾಜ ಕೋರಲಹಳ್ಳಿ ಇತರರಿದ್ದರು.
Published on

ಶಿಕಾರಿಪುರ: ಸದೃಢ ಭಾರತ, ಸಮರ್ಥ ಭಾರತ, ಸಮೃದ್ಧ ಭಾರತವಾಗಿ ದೇಶ ಇಂದು ವಿಶ್ವದ ಆಗಸದಲ್ಲಿ ಪ್ರಕಾಶಿಸುತ್ತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲೂಕಿನ ಚುರ್ಚಿಗುಂಡಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ನನ್ನ ಮಣ್ಣು, ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ನೆಲ, ಜಲ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಋಷಿ-ಮುನಿಗಳು, ಸಾಧು-ಸಂತರು, ಮಹಾಂತರು, ಶರಣರು ಜನಿಸಿದ, ನಡೆದಾಡಿದ ದೈವ ಸದೃಶವಾದ ಈ ಮೃತ್ತಿಕೆಯನ್ನು ದೇಶದೆಲ್ಲೆಡೆಯಿಂದ ಸಂಗ್ರಹಿಸಲಾಗುತ್ತಿದೆ ಎಂದರು.
ನಮ್ಮ ಜನ್ಮಭೂಮಿಯ ಈ ಮಣ್ಣು ಅತ್ಯಂತ ಪವಿತ್ರವಾಗಿದೆ. ನಮ್ಮದು ಆಧ್ಯಾತ್ಮಿಕ, ಶೌರ್ಯ, ಸಾಹಸ, ಪರಾಕ್ರಮದ ಜತೆಗೆ ವಿಶ್ವಾಸ, ನಂಬಿಕೆ, ಸ್ನೇಹ, ಸದ್ವಿಚಾರಗಳ ಸಂಗಮವಾಗಿರುವ ಮಣ್ಣು. ನಾವು ಶಾಂತಿ-ನೆಮ್ಮದಿಯಿಂದ ಇರಲು ಕಾರಣ ಗಡಿನಾಡಿನಲ್ಲಿ ಹಗಲಿರುಳು ಎನ್ನದೆ ಮಳೆ, ಬಿಸಿಲು, ಚಳಿಯೆನ್ನದೆ ಜೀವದ ಹಂಗು ತೊರೆದು ನಮ್ಮನ್ನು ಕಾಯುತ್ತಿರುವ ಯೋಧರು. ಪ್ರತಿನಿತ್ಯ ನಾವು ಅವರ ಸ್ಮರಣೆ ಮಾಡಬೇಕು. ಅವರ ಸೇವೆಗಿಂತ ಮಿಗಿಲಾದ ಯಾವ ಸೇವೆಯೂ ಇಲ್ಲ. ಇಂದು ನಾವು ಯಾವುದೇ ಚಿಂತೆಯಿಲ್ಲದೆ ಬದುಕಲು ಸೈನಿಕರೇ ಕಾರಣ. ನಾವು ಯಾವಾಗಲೂ ಅವರಿಗೆ ಋಣಿಯಾಗಿರಬೇಕು. ಸೈನಿಕರೇ ನಮಗೆ ಪ್ರತ್ಯಕ್ಷ ದೈವವಿದ್ದಂತೆ ಎಂದು ಬಣ್ಣಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಪಕ್ಷದ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ನಿಂಬೆಗೊಂದಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜ ಕೋರಲಹಳ್ಳಿ, ಯುವ ಮೋರ್ಚಾ ಅಧ್ಯಕ್ಷ ಬೆಣ್ಣೆ ಪ್ರವೀಣ್, ಮುಖಂಡರಾದ ಕೆ.ಎಸ್.ಗುರುಮೂರ್ತಿ, ಜಗದೀಶ್ ಈಸೂರು, ಉಮೇಶ್ ಕಲ್ಮನೆ, ಪ್ರತಾಪ್ ಗಾಮ ಇತರರಿದ್ದರು.
ಅಭಿಯಾನಕ್ಕೆ ಪೂರಕವಾಗಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಚುರ್ಚುಗುಂಡಿ ಗ್ರಾಮದ ನಿವೃತ್ತ ಯೋಧ ದೇವರಾಜು ಹಾಗೂ ಕೊರಲಹಳ್ಳಿ ಗ್ರಾಮದ ನಿವೃತ್ತ ಯೋಧ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಯೋಧರನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net