

ಮೈಸೂರು: ದೇಶ 2035ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡುವ ಹಾಗೂ 2040ಕ್ಕೆ ಭಾರತೀಯರನ್ನು ಚಂದ್ರ ಲೋಕಕ್ಕೆ ಕರೆದೊಯ್ದು ವಾಪಾಸ್ ಕರೆತರುವ ಯೋಜನೆಯನ್ನು ಹೊಂದಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದರು.
ದಟ್ಟಗಳ್ಳಿಯ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್‌ನಲ್ಲಿ ಮಂಗಳವಾರ ‘ಸ್ಪೇಸ್ ಲ್ಯಾಬ್’ ಉದ್ಘಾಟಿಸಿ ಮಾತನಾಡಿ, ಚಂದ್ರನಲ್ಲಿಗೆ ಮಾನವ ಹೋಗಿ ಬರುವ ವಾತಾವರಣ ನಿರ್ಮಾಣವಾಗಬೇಕಾದರೆ ಸಾಕಷ್ಟು ಅಧ್ಯಯನಗಳು ನಡೆಸುವ ಅವಶ್ಯಕತೆ ಇದೆ. ಚಂದ್ರನಲ್ಲಿ ಯಾವ ರೀತಿಯ ವಾತಾವರಣ ಇದೆ ಎಂಬುದು ತಿಳಿದುಕೊಳ್ಳುವುದು ಅವಶ್ಯಕ. ಚಂದ್ರಯಾನ-3ರಲ್ಲಿ ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಚಂದ್ರನ ಕುರಿತು ಸಾಕಷ್ಟು ಮಾಹಿತಿಯನ್ನು ಭೂಮಿಗೆ ರವಾನಿಸಿದೆ. ನಮ್ಮ ದೇಶದ 50 ರಿಂದ 60 ಉಪಗ್ರಹಗಳು ಇವೆ. ಬರುವ ಕೆಲವು ವರ್ಷಗಳಲ್ಲಿ ಭಾರತೀಯರು ಭೂಮಿಯನ್ನು ಸುತ್ತಿ ವಾಪಾಸ್ ಬರುವ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಿದರು.
ಪ್ರಕೃತಿಯಲ್ಲಿ ಕಾಣುವುದನ್ನು ತಾನು ಸಹ ನಿರ್ಮಾಣ ಮಾಡಬೇಕು ಎಂಬ ಮನುಷ್ಯನ ತೀವ್ರವಾದ ಹಂಬಲದಿಂದ ವಿಶ್ವದಲ್ಲಿ ಸಾಕಷ್ಟು ಹೊಸ ಆವಿಷ್ಕಾರಗಳು ನಡೆಯುತ್ತಿದೆ. ಮಕ್ಕಳಲ್ಲಿ ಸಾಕಷ್ಟು ಕುತೂಹಲ ಇರುತ್ತದೆ. ಈ ಕುತೂಹಲದ ಕಾರಣದಿಂದ ಮಕ್ಕಳು ಪಾಲಕರ ಬಳಿ ಪ್ರಪಂಚದ ಕುರಿತು ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಪಾಲಕರಿಗೆ ತಿಳಿಯದ ವಿಚಾರವನ್ನು ಮಕ್ಕಳು ಕೇಳಿದಾಗ ಗದರಿಸಿ ಮಕ್ಕಳನ್ನು ಸುಮ್ಮನಾಗಿಸುತ್ತಾರೆ. ಈ ರೀತಿ ಪಾಲಕರು ಎಂದಿಗೂ ಮಾಡಬಾರದು. ಮಕ್ಕಳು ಕೇಳುವ ಪ್ರಶ್ನೆಗೆ ನಿಮ್ಮ ಬಳಿ ಉತ್ತರ ಇಲ್ಲದೆ ಇದ್ದರೆ ಹೋದರೆ ತಿಳಿದು ಹೇಳುವ ಪ್ರಯತ್ನ ಮಾಡಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.