ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

hn-25-1
Published on

ವಿಜಯಪುರ: ಆರ್‌ಎಸ್‌ಎಸ್‌ನವರು ಭಾರತದ ನಿಜವಾದ ತಾಲಿಬಾನಿಗಳು ಎಂಬ ಅಸಂಬದ್ಧ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ತಾಲಿಬಾನಿಗಳಿಗೆ ಬೆಂಬಲಿಸುತ್ತಿರುವ ಕಾಂಗ್ರೆಸಿಗರು ಬಿಜೆಪಿ ಬಗ್ಗೆ ಮತ್ತು ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ. ಸಾಕಷ್ಟು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹಾಗೂ ದೇಶವಿರೋಧಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಪಕ್ಷ ಇನ್ನು 15 ವರ್ಷಗಳಲ್ಲಿ ದೇಶದಲ್ಲಿ ನಾಮಶೇಷವಾಗಲಿದೆ ಎಂದರು.

ಪ್ರವಾಹದಂತಹ ಪರಿಸ್ಥಿತಿ, ಕರೊನಾದಂತಹ ಮಹಾಮಾರಿ, ಯುದ್ಧದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಜನರ ಸೇವೆಗೆ ತೆರಳುವ ಆರ್‌ಎಸ್‌ಎಸ್‌ಗೆ ಅವಮಾನ ಮಾಡಿದರೆ ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತೆಸೆಯಲ್ಲಿದ್ದಾರೆ. ಪ್ರಚಾರದ ಗುಂಗಲ್ಲಿ ಧ್ರುವನಾರಾಯಣ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಬಗ್ಗೆ ಮಾತನಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಶಿಂಧೆ, ಯುವ ಮೋರ್ಚಾ ಪ್ರಭಾರಿ ರಾಜೇಶ ತವಸೆ, ನಾಗಠಾಣ ಯುವ ಮೋರ್ಚಾ ಮಂಡಲ ಅಧ್ಯಕ್ಷ ರವಿ ಬಿರಾದಾರ, ವಿಜಯಪುರ ನಗರ ಪ್ರಧಾನ ಕಾರ್ಯದರ್ಶಿ ಪ್ರವೀಣ ಕೂಡಗಿ, ಮುಖಂಡರಾದ ಅನೀಲ ಉಪ್ಪಾರ, ಆದಿತ್ಯ ತಾವರಗೇರಿ, ವಿಠ್ಠಲ ನಡುವಿನಕೇರಿ, ಮಲ್ಲು ಕಲಾದಗಿ, ಪಾಪುಸಿಂಗ ರಜಪೂತ, ಪರಶುರಾಮ ಹೊಸಪೇಠ, ಪ್ರೇಮ ಬಿರಾದಾರ, ರಾಜಕುಮಾರ ಗೌಂಡಿ, ದಿನೇಶಗೌಡ ಪಾಟೀಲ, ಮಂಜು ಕಡಪಟ್ಟಿ, ಸಾಗರ ಕಾಪ್ಸೆ, ವಿಕಾಸ ಪದಕಿ, ಪ್ರಶಾಂತ ಪೂಜಾರಿ, ಪ್ರಶಾಂತ ಅಗಸರ, ಸತೀಶ ಅಗಸರ, ನಿಖಿಲ ಚೌಧರಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net