

ಶಿವಮೊಗ್ಗ: ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರದ ಅಧಿಕಾರಕ್ಕೆ ಬಂದ ಮೇಲೆ ಭಾರತ ವಿಕಸಿತವಾಗುವ ಜತೆಗೆ ವಿಶ್ವಗುರು ಸ್ಥಾನದತ್ತ ದಾಪುಗಾಲಿಡುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಣ್ಣಿಸಿದರು.
ಬಿಜೆಪಿ ಶಿವಮೊಗ್ಗ ನಗರ ಜಿಲ್ಲಾ ಕಚೇರಿಯಲ್ಲಿ ಭಾನುವಾರ ದೀನದಯಾಳು ಮಹಾಶಕ್ತಿ ಕೇಂದ್ರ ವ್ಯಾಪ್ತಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಆಡಳಿತದ ಚುಕ್ಕಾಣಿ ಹಿಡಿದು 11ನೇ ವಸಂತಕ್ಕೆ ದಾಪುಗಾಲು ಇಟ್ಟಿರುವ ಐತಿಹಾಸಿಕ ಕ್ಷಣವನ್ನು ಮತದಾರರ ನಡುವೆ ಸಾಕ್ಷೀಕರಿಸಲು ಬಿಜೆಪಿ ದೇಶಾದ್ಯಂತ ವಿಕಸಿತ ಭಾರತ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಹನ್ನೊಂದು ವರ್ಷಗಳಲ್ಲಿ ಮೋದಿ ಸರ್ಕಾರ ಅಂತ್ಯೋದ್ಯಯ ಪರಿಕಲ್ಪನೆಯಡಿ ಎಲ್ಲ ವರ್ಗದ ಜನಸಾಮಾನ್ಯರ ಹಿತ ಕಾಪಾಡಲ ಶ್ರಮಿಸಿದೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಹಾಗೂ ಸ್ವಾವಲಂಬಿ ಜೀವನ ನಡೆಸಲು ನೂರಾರು ಐತಿಹಾಸಿಕ ಯೋಜನೆಗಳನ್ನು ರೂಪಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿದೆ ಎಂದರು.
ಮೂಲ ಸೌಕರ್ಯ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಕೃಷಿ ಕ್ಷೇತ್ರದ ಪ್ರಗತಿ, ಕೈಗಾರಿಕಾ ವಲಯ ಆಧುನೀಕರಣ, ರಾಜತಾಂತ್ರಿಕ ವ್ಯವಸ್ಥೆ ಸುಧಾರಣೆ, ಪ್ರವಾಸೋದ್ಯಮಕ್ಕೆ ಬಲ, ರಕ್ಷಣಾ ವಿಭಾಗ ಉನ್ನತಿಕರಣ, ಯುವ ಮತ್ತು ಮಹಿಳಾ ಸಬಲೀಕರಣ, ದೇಶದ ಆಮೂಲಾಗ್ರ ಆರ್ಥಿಕ ಸುಧಾರಣೆ ಸೇರಿ ಅನೇಕ ವಿಭಾಗಗಳಲ್ಲಿ ಐತಿಹಾಸಿಕ ಬದಲಾವಣೆ ಕಾಣಲಾಗಿದೆ ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಸೂಡಾ ಮಾಜಿ ಅಧ್ಯಕ್ಷ ಎನ್.ಜೆ.ನಾಗರಾಜ್, ಚಂದ್ರಶೇಖರ್ ಇತರರಿದ್ದರು.