

ಸಿರಿಗೆರೆ: ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಯನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಬಂದಿದೆ.
ಚಂದ್ರಯಾನ-3 ಯೋಜನೆಯ ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ನೆಲಕ್ಕಿಳಿದು ಇತಿಹಾಸ ಬರೆಯಲು ಸನ್ನದ್ಧವಾಗಿದ್ದು, ಸಂಜೆ 6 ಗಂಟೆ 3 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಕಾಲೂರಲಿದೆ ಎಂದು ಕಡ್ಲೆಗುದ್ದು ಶಾಲೆಯ ಮುಖ್ಯ ಶಿಕ್ಷಕ ಡಾ.ಮಹೇಶ್ ಹೇಳಿದರು.
ಕಡ್ಲೆಗುದ್ದು ಗ್ರಾಮದ ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ಚಂದ್ರನ ಅಂಗಳದಲ್ಲಿ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆ ನಿಜಕ್ಕೂ ಅವಿಸ್ಮರಣೀಯವಾಗಿದೆ.
ಇಸ್ರೋ 140 ಕೋಟಿ ಭಾರತೀಯರ ಜತೆ ಈ ರೋಚಕ ಕ್ಷಣಕ್ಕಾಗಿ ಉಸಿರು ಬಿಗಿಹಿಡಿದು ಕಾಯುತ್ತಿದೆ. ಇಡೀ ವಿಶ್ವ ಭಾರತದತ್ತ ಕುತೂಹಲದ ದೃಷ್ಟಿ ನೆಟ್ಟಿದೆ ಎಂದರು.
ಕೇವಲ 600 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಕಾಲಿಟ್ಟರೆ ಇಲ್ಲಿಗೆ ತಲುಪಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಚಂದ್ರನ ನೆಲದ ಮೇಲೆ 14 ದಿನಗಳ ಕಾಲ ರೋವರ್ ಓಡಾಡಲಿದೆ ಎಂದು ತಿಳಿಸಿದರು.
ಶಿಕ್ಷಕ ಮಂಜುನಾಥ್ ಮಾತನಾಡಿ, ಇಸ್ರೋ ಸಂಸ್ಥೆಯ ಸಾಧನೆಯ ಹಿಂದೆ ಸಾವಿರಾರು ವಿಜ್ಞಾನಿಗಳ ಶ್ರಮವಿದೆ. ಭಾರತೀಯ ಸಂಶೋಧಕರು ಏನು ಬೇಕಾದರೂ ಸಾಧಿಸಬಲ್ಲರು ಎಂಬುದಕ್ಕೆ ಇಂದು ಸಂಜೆ ಉತ್ತರ ದೊರೆಯಲಿದೆ.
ಎಲ್ಲ ವಿದ್ಯಾರ್ಥಿಗಳು ಸಂಜೆ ಚಂದ್ರಯಾನ 3ರ ನೇರ ಪ್ರಸಾರವನ್ನು ವೀಕ್ಷಿಸಿ ಇಂತಹ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿ ಎಂದರು.
ಶಿಕ್ಷಕರಾದ ನಟರಾಜ್, ನಾಗರಾಜ್, ಕರಿಬಸಪ್ಪ, ಮಹಾಂತೇಶ್ ಇತರರಿದ್ದರು.