

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇತ್ತೀಚೆಗೆ ಬಿಡುಗಡೆಯಾದ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಭಾರತ 85ನೇ ಸ್ಥಾನದಲ್ಲಿದೆ. ದೇಶದಲ್ಲಿ ಪವರ್ಫುಲ್ ಪ್ರಧಾನಿ ಇದ್ದಾರೆ ಅಂದ್ರೆ ಭಾರತ ಮೊದಲ ಸ್ಥಾನದಲ್ಲಿ ಇರಬೇಕಿತ್ತಲ್ಲ ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯ್ ಪಟೇಲ ಅವರೇ ಆರ್ಎಸ್ಎಸ್ ಸಂಘಟನೆಯನ್ನು ನಿಷೇಧ ಮಾಡಿದ್ದರು. ಈ ಬಗ್ಗೆ ನಾನು ಸುಳ್ಳು ಹೇಳುತ್ತಿಲ್ಲ, ದಾಖಲೆ ತೆಗೆದು ನೋಡಿ. ಆದರೆ, ಬಿಜೆಪಿಯವರು ಪಟೇಲ್ ಪ್ರತಿಮೆಯನ್ನು ನಿರ್ವಿುಸಿದರು. ಇವರ ಐಡಿಯಾಲಜಿ ನನಗೆ ಅರ್ಥವಾಗುತ್ತಿಲ್ಲ. ಬಿಜೆಪಿಯವರು ಯಾರ ಪರ ಇದ್ದಾರೆ, ಯಾರ ವಿರುದ್ಧ ಇದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ ಎಂದು ಹೇಳಿದರು.
ಚುನಾವಣೆ ಬಂದಾಗ ರಾಮ ಮಂದಿರ, ಹಿಂದು-ಮುಸ್ಲಿಂ, ಖಲಿಸ್ಥಾನ, ಪಾಕಿಸ್ತಾನ್ ಬರುತ್ತೆ ಎಂಬುದು ನಮಗೆ ಗೊತ್ತು. ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಸರಕುಗಳು ಆಮದು ಆಗುತ್ತಿವೆ. ಹಾಗಾದರೆ ಮೇಕ್ ಇನ್ ಇಂಡಿಯಾ ಎಲ್ಲಿದೆ? ಮೇಕ್ ಇನ್ ಇಂಡಿಯಾಗೆ 450 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದರ ಬಗ್ಗೆ ಬಿಜೆಪಿಯವರು ಮಾತನಾಡುವುದಿಲ್ಲ. ದೇಶದ ಸಾಲ ಎಷ್ಟಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿಯವರು ಉತ್ತರಿಸಲಿ ಎಂದರು.