

ಬಳ್ಳಾರಿ: ಕುತೂಹಲ, ಸಂಶೋಧನೆ ಮತ್ತು ವಿಸ್ಮಯಗಳೇ ವಿಜ್ಞಾನ ಬೆಳವಣಿಗೆಗೆ ಕಾರಣ ಎಂದು ಕುಂದಾಪುರದ ವಿಜ್ಞಾನ ಸಾಹಿತಿ ಎಚ್.ದಿವಾಕರ ಶೆಟ್ಟಿ ಹೇಳಿದರು.
ಇದನ್ನೂ ಓದಿ: http://ವಿಜ್ಞಾನ
ಇಲ್ಲಿನ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಡೂರಿನ ಬಸವ ಪಬ್ಲಿಕೇಷನ್ಸ್, ಜಿಲ್ಲಾ ಕಸಾಪ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನ ಸಾಹಿತಿ ಡಾ.ಯು.ಶ್ರೀನಿವಾಸಮೂರ್ತಿ ಅವರ ‘ವಿಜ್ಞಾನದಂಗಳ’ ಪುಸ್ತಕ ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿದರು.
ಬದಲಾಗುತ್ತಿರುವ ನಾಗರಿಕ ಸಮಾಜಕ್ಕೆ ಸಮಸ್ಯೆಗಳು ಉಂಟಾದಾಗ ಉತ್ತರ ನೀಡಬಲ್ಲದು ವಿಜ್ಞಾನ. ವಿಜ್ಞಾನ ಭೂಮಿಯೊಳಗೆ, ಭುಮಿ ಮೇಲೆ ಮತ್ತು ಆಕಾಶದಲ್ಲಿ ಮಾನವನ ಬದುಕಿಗೆ ಸಿಗಬಲ್ಲ ಅನುಕೂಲಗಳನ್ನು ಹುಡುಕುತ್ತಿದೆ. ಇವತ್ತಿನ ಭಾರತೀಯ ವಿಜ್ಞಾನಿಗಳ ಸಾಧನೆಗೆ ವಿಶ್ವವೇ ಬೆರಗಾಗುತ್ತಿದೆ.
ಅದಕ್ಕೆ ಪೂರಕವಾಗಿ ಯುವಕರು ವಿಜ್ಞಾನದ ಓದನ್ನು ಹೆಚ್ಚು ಆಯ್ಕೆ ಮಾಡಿಕೊಂಡು ಓದಬೇಕಿದೆ. ಕೋವಿಡ್ 19ರ ಸಮಯದಲ್ಲಿ ನಾವೆಲ್ಲರೂ ಮನೆಯಲ್ಲಿ ಲಾಕ್ ಆದಾಗ, ಮಕ್ಕಳಿಗೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಮಾಡಬಹುದಾದ 26 ವಿಜ್ಞಾನದ ಪ್ರಯೋಗಗಳನ್ನು ಮಾಡುವ ವಿಧಾನ ವಿವರಿಸುತ್ತ, ಅಲ್ಲಿರುವ ವಿಜ್ಞಾನದ ತತ್ವ-ನಿಯಮಗಳನ್ನು ಸುಲಭವಾಗಿ ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಿ, ಪತ್ರಿಕೆಗಳಿಗೆ ಬರೆದ ಆ ಎಲ್ಲ ಲೇಖನಗಳನ್ನು ಸೇರಿಸಿ ಪುಸ್ತಕ ಹೊರತಂದಿದ್ದಾರೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿ, ವಿಜ್ಞಾನದ ಬೆಳವಣಿಗೆ ಜತೆಗೆ ಪರಿಸರದ ಬಗೆಗಿನ ಕಾಳಜಿ ಅರಿಯುವ ಅಗತ್ಯತೆ ಇಂದಿನ ಯುವ ಜನತೆಗೆ ಅಗತ್ಯ. ವಿಜ್ಞಾನ ಸದಾ ಮಾನವನ ಏಳಿಗೆ ಬಯಸುತ್ತದೆ. ಆದರೆ, ವಿಜ್ಞಾನದ ಉತ್ಪನ್ನವಾದ ತಂತ್ರಜ್ಞಾನವನ್ನು ಜನರು ತಮಗೆ ಅರಿವಿಲ್ಲದೆ ಅತಿಯಾಗಿ ಬಳಸುವುದರಿಂದ ಹೊಸ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದರು. ವಿಚಾರವಾದಿ ಆದಿನಾರಾಯಣರೆಡ್ಡಿ, ಪ್ರಾಚಾರ್ಯ ಡಾ.ಎ.ಸತೀಶ್ ಹಿರೇಮಠ, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿರುದ್ರಪ್ಪ, ಸುಲೇಖ ಬಿ. ಇದ್ದರು.