ಮೇ 30ರಿಂದ ‘ಇಂಡಿಯಾ ಎಂಎಸ್‌ಎಂಇ’ ಸಮಾವೇಶ

Vijayavani Logo
Published on

ಬೆಂಗಳೂರು: ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮ (ಎಂಎಸ್‌ಎಂಇ) ವಲಯವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ, ಸಭಾಂಗಣದಲ್ಲಿ ಈ ತಿಂಗಳ 30ರಿಂದ ಜೂ.1ರವರೆಗೆ ‘ಇಂಡಿಯಾ ಎಂಎಸ್‌ಎಂಇ ಸಮಾವೇಶ - 2025’ ಆಯೋಜಿಸಲಾಗಿದೆ.

ಈ ಸಂಬಂಧ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಎ್ಕೆಸಿಸಿಐ, ಕಾಸಿಯಾ ಹಾಗೂ ಪೀಣ್ಯ ಕೈಗಾರಿಕೆ ಸಂಘಗಳ ಮುಖ್ಯಸ್ಥರು ಮಾತನಾಡಿ ಸಮಾವೇಶದ ಕುರಿತು ಮಾಹಿತಿ ನೀಡಿದರು.

ಈ ಮೂರು ದಿನಗಳ ಸಮಾವೇಶದಲ್ಲಿ ಎಂಎಸ್‌ಎಂಇಗಳಿಗೆ ಸಾರ್ವಜನಿಕ ವಲಯ ಘಟಕಗಳು ಮತ್ತು ದೊಡ್ಡ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಲು ಹಾಗೂ ‘ಮೇಕ್ ಇನ್ ಇಂಡಿಯಾ’ ಯೋಜನೆ ಅಡಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಈ ಸಮಾವೇಶ ಆಯೋಜಿಸಲಾಗುತ್ತಿದೆ. ಜತೆಗೆ ಕೇಂದ್ರ ಸರ್ಕಾರದ ಕೈಗಾರಿಕೆಗಳು ಮತ್ತು ದೊಡ್ಡ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಲು ಸೂಕ್ತ ವೇದಿಕೆ ಸಿಗಲಿದೆ ಎಂದು ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ತಿಳಿಸಿದರು.

ರೈಲು ಕೈಗಾರಿಕೆಗಾಗಿ ಉದ್ಯಮ ಪಾರ್ಕ್:

ಎಫ್​​ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಮಾತನಾಡಿ, ಸಮಾವೇಶದಲ್ಲಿ 250ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು, ಬಿ2ಬಿ ಸಭೆಗಳು, ಕೈಗಾರಿಕಾ ತಜ್ಞರಿಂದ ಪ್ರತ್ಯಕ್ಷತಾ ಕಾರ್ಯಕ್ರಮ, ಕೌಶಲ್ಯ ಅಭಿವೃದ್ಧಿ ಮತ್ತು ಪ್ರಮಾಣೀಕರಣ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ರೈಲು ಕೈಗಾರಿಕೆಗಾಗಿ ಎಂಎಸ್‌ಎಂಇ ಉದ್ಯಮ ಪಾರ್ಕ್ ಆರಂಭಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು. ಇದರಿಂದ ಮಹಿಳಾ ಮತ್ತು ಪರಿಶಿಷ್ಟರ ಉದ್ಯಮಿಗಳಿಗೆ ಶೇ.100 ಸಬ್ಸಿಡಿ, ಸಾಮಾನ್ಯ ವರ್ಗದ ಎಂಎಸ್‌ಎಂಇಗಳಿಗೆ ಶೇ.80 ಸಬ್ಸಿಡಿ, ಪ್ರಯಾಣ ಮತ್ತು ಪ್ರಚಾರಕ್ಕೆ 25,000 ವರೆಗೆ ವೆಚ್ಚ ಸಹಾಯ, ಎಕಾನಮಿ ಕ್ಲಾಸ್ ವಿಮಾನ ಪ್ರಯಾಣ ವೆಚ್ಚದ ಸೌಲಭ್ಯಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪೀಣ್ಯ ಕೈಗಾರಿಕೆ ಸಂಘಗಳ ಅಧ್ಯಕ್ಷ ಶಿವಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net