ಭಾರತದ ಭೂಪಟ ಚಂದ್ರಲೋಕಕ್ಕೆ ವಿಸ್ತರಣೆ

SIRIGERE CHANDRA 22
Published on

ಸಿರಿಗೆರೆ: ಭಾರತದ ಭೂಪಟವನ್ನು ಚಂದ್ರಲೋಕಕ್ಕೆ ವಿಸ್ತರಿಸಿ ದೇಶದ ಹಿರಿಮೆ ಹೆಚ್ಚಿಸಿದ ಕೀರ್ತಿ ಇಸ್ರೋ ವಿಜ್ಞಾನಿಗಳಿಗೆ ಸಲ್ಲುತ್ತದೆ ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಿರಿಗೆರೆಯ ಗುರುಶಾಂತೇಶ್ವರ ಭವನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 31ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಡೀ ಜಗತ್ತು ಚಂದ್ರಯಾನವನ್ನು ಕುತೂಹಲದಿಂದ ವೀಕ್ಷಿಸಿತು. ತಾಯಂದಿರು ಮಕ್ಕಳಿಗೆ ಹಾಲು ಕುಡಿಸುವಾಗ ಚಂದ್ರನನ್ನು ತೋರಿಸುತ್ತಿದ್ದರು. ಅದರಿಂದ ಪ್ರೇರಣೆ ಪಡೆದ ನಮ್ಮ ವಿಜ್ಞಾನಿಗಳು ಚಂದ್ರನಿಗೆ ಲಗ್ಗೆ ಹಾಕುವಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದರು.

ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಮುಂದಿನ ದಿನದಲ್ಲಿ ಹರಪನಹಳ್ಳಿ ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣ ಮತ್ತು ಸ್ಪೋಕನ್ ಇಂಗ್ಲೀಷ್ ಮುಖ್ಯ ಎಂದರು.

ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ ಮಾತನಾಡಿ, ವಿದ್ಯುತ್, ಸಾರಿಗೆ ವ್ಯವಸ್ಥೆ ಇಲ್ಲದಂತಹ ಹಳ್ಳಿಗಳಲ್ಲಿ ಶಾಲೆಗಳನ್ನು ಆರಂಭಿಸಿ ಅವಕಾಶ ವಂಚಿತರಿಗೆ ಅಕ್ಷರ ಜ್ಞಾನ ನೀಡಿದವರು ಹಿರಿಯ ಗುರುಗಳೂ. ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ ಮಹಾಪುರುಷ ಎಂದು ಹೇಳಿದರು.

ಇಸ್ರೋ ವಿಜ್ಞಾನಿ ರಾಮನಗೌಡ ವಿ.ನಾಗನಗೌಡ, ದಾವಣಗೆರೆ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಮಾತನಾಡಿದರು. ದಾವಣಗೆರೆ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಆನಂದ ಎಸ್.ಪಾಟೀಲ್ ನೇತೃತ್ವದ ತಂಡ ವಚನಗೀತೆ ಹಾಡಿತು. ಬರ್ಗಿ ಕುಮುಟಾದ ಬ್ರಹ್ಮಲಿಂಗೇಶ್ವರ ಯಕ್ಷ ಮಿತ್ರ ಮಂಡಳಿ ಯಕ್ಷಗಾನ ಹಾಗೂ ತರಳಬಾಳು ಕಲಾಸಂಘದ ತಂಡದವರು ಸೋಲಿಗರ ನೃತ್ಯ, ಕರಗ ಕೋಲಾಟ ನೃತ್ಯ ಪ್ರದರ್ಶನ ಪ್ರದರ್ಶಿಸಿದರು.

ಜರ್ಮನಿಯ ಆನಿ ಫಿಟ್ಜರ್, ಬೆಂಗಳೂರು ಇಸ್ರೋ ವಿಜ್ಞಾನಿಗಳಾದ ಡಾ.ಬಿ.ಎಚ್.ಎಂ.ದಾರುಕೇಶ್, ಗೋವಿಂದರಾಜ್ ಶೆಟ್ಟಿ, ಹೇಮಲತಾ ಇತರರರಿದ್ದರು.

ಸಿರಿಗೆರೆಯಲ್ಲಿ ಇಂದು: ಶನಿವಾರ ಬೆಳಗ್ಗೆ 6.30ಕ್ಕೆ ಐಕ್ಯ ಮಂಟಪದಲ್ಲಿ ಸಾಮೂಹಿಕ ಪ್ರಾರ್ಥನೆ, ವಿದ್ಯಾರ್ಥಿಗಳಿಂದ ಶಿವ ಮಂತ್ರ ಲೇಖನ ಬರೆಯುವುದು. ಬೆಳಗ್ಗೆ 9.30ಕ್ಕೆ ಗುರು ಶಾಂತೇಶ್ವರ ದಾಸೋಹ ಭವನದಲ್ಲಿ ರಕ್ತದಾನ, ನೇತ್ರ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.

11 ಗಂಟೆಗೆ ತರಳಬಾಳು ವಿದ್ಯಾಸಂಸ್ಥೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ವಚನ, ನೃತ್ಯ, ಜನಪದ, ಕಿರು ನಾಟಕ, ಏಕಪಾತ್ರ ಅಭಿನಯ, ಆಶುಭಾಷಣ ಸ್ಪರ್ಧೆ, ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ. ಸಂಜೆ 4ಕ್ಕೆ ಶಿವಕುಮಾರ ಶಿವಾಚಾರ್ಯ ಶ್ರೀಗಳ ಭಾವಚಿತ್ರದ ಮೆರವಣಿಗೆ. 6 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಕೆ.ಎಚ್.ಮುನಿಯಪ್ಪ, ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರಾದ ಡಾ.ಎಂ.ಚಂದ್ರಪ್ಪ, ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಭಾಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net