ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಭಾರತ

India is the solution to the world's problems
ವಿಜಯಪುರ ನಗರದ ಆರ್‌ಎಸ್‌ಎಸ್ ನಗರ ಘಟಕದ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
Published on

ವಿಜಯಪುರ: ವೈರುಧ್ಯಗಳನ್ನು ಎದುರಿಸುತ್ತಿರುವ ಪ್ರಪಂಚದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹಾಗೂ ಆಶಾಕಿರಣ ಭಾರತ. ವಸುದೈವ ಕುಟುಂಬಕಂ ಎಂಬ ಧ್ಯೇಯವೇ ಭಾರತದ ಮೇಲೆ ಇಡೀ ಜಗತ್ತು ಕೇಂದ್ರೀಕರಿಸುವಂತಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದರು.

ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕರೊನಾದಂಥ ಅನೇಕ ವೈರಸ್ ನಮ್ಮ ಜತೆಯಲ್ಲಿದ್ದು, ಜಾತಿಗಳ ನಡುವೆ ವಿಘಟನೆ, ಹಿಂದು ಸಮಾಜದ ಮೇಲೆ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಲೇ ಇವೆ. ದುಷ್ಟಶಕ್ತಿಗಳು ಭಾರತದ ಮುಂದಿಡುತ್ತಿರುವ ಸವಾಲುಗಳನ್ನು ನಾವು ಸಮರ್ಥವಾಗಿ ಎದುರಿಸಬೇಕಿದೆ. ಮೆರವಣಿಗೆಯಲ್ಲಿ ಮಾತ್ರ ಹಿಂದು ಘೋಷಣೆಗೆ ಸೀಮಿತವಾಗಬಾರದು, ದಿನನಿತ್ಯ ಹಿಂದು ಆಗಬೇಕು ಎಂದರು.

ಈಶನ ಬಗ್ಗೆ ಇರುವ ಶ್ರದ್ಧೆ ದೇಶದ ಮೇಲೆ ಬಂದರೆ ಹಿಂದು ಧರ್ಮ ಮತ್ತೆ ಸಂಘಟಿತವಾಗಲು ಸಾಧ್ಯವಿದೆ. ಅಧಿಕಾರಿಯೊಬ್ಬರನ್ನು ನಾವು ಕರೆದು ಚಹಾ ಕುಡಿಸುತ್ತೇವೆ. ಆದರೆ ಪೌರ ಕಾರ್ಮಿಕರನ್ನು ಕರೆದು ಚಹಾ ಕುಡಿಸುತ್ತೆವೆಯೇ? ಈ ಕಾರಣಕ್ಕಾಗಿಯೇ ಅವರು ಬೇರೆ ಹೆಸರುಗಳನ್ನು ಪಡೆಯುವಂತಾಗುತ್ತಿದೆ. ಭಾರತ ಮಾತೆ ಜಗತ್ತಿನ ಸಿಂಹಾಸನದ ಮೇಲೆ ಆನಂದದಿಂದ ವಿರಾಜಮಾನವಾಗುವಂತೆ, ದುಷ್ಟಶಕ್ತಿಗಳು ಭಾರತದತ್ತ ಕಣ್ಣೆತ್ತಿ ನೋಡದಂತೆ ಮಾಡುವುದು ಆರ್‌ಎಸ್‌ಎಸ್ ಧ್ಯೇಯ ಎಂದರು.

ಒಳಜಗಳ, ಮೇಲು ಕೀಳು ಎಂಬ ಮನೋಭಾವದಿಂದಾಗಿ ಹಿಂದು ಸಮಾಜಕ್ಕೆ ಭವಿಷ್ಯವಿಲ್ಲ ಎಂದು ಅನೇಕರು ಭಾವಿಸಿದ್ದರು. ಆದರೆ ಡಾ. ಹೆಡಗೆವಾರ ಸ್ಥಾಪಿಸಿದ ಆರ್‌ಎಸ್‌ಎಸ್ ಹಿಂದು ಸಮಾಜಕ್ಕೆ ಎದುರಾಗಿದ್ದ ಕೊರತೆ ನೀಗಿಸಲು ರೂಪುಗೊಂಡಿತು. ಆರ್‌ಎಸ್‌ಎಸ್ ಸ್ವಯಂ ಸೇವಕರು ನಿಸ್ವಾರ್ಥಿಗಳು, ಪರಿಶ್ರಮಿಗಳು, ಪ್ರಾಮಾಣಿಕರು, ಸದಾ ಉತ್ಸಾಹಿಗಳು ಎಂದರು.

ವೈದ್ಯ ಡಾ. ರಮೇಶ ಮಾನಕರೆ ಮಾತನಾಡಿ, ಹಿಂದುಗಳನ್ನು ಒಗ್ಗೂಡಿಸಿ ಹಿಂದು ರಾಷ್ಟ್ರ ನಿರ್ಮಾಣವೇ ಆರ್‌ಎಸ್‌ಎಸ್ ಧ್ಯೇಯ. ಹಿಂದು ಸಂಸ್ಕೃತಿಯೇ ಅದರ ಉಸಿರು. ಸತ್ಯ, ಒಳ್ಳೆಯ ನಡತೆ, ಪ್ರೀತಿ, ಶಾಂತಿ ಹಿಂಧು ಧರ್ಮದ ಸಂಹಿತೆ. ನೈಸರ್ಗಿಕ ವಿಕೋಪ ಎದುರಾದಾಗ ಆರ್‌ಎಸ್‌ಎಸ್ ಸ್ವಯಂ ಸೇವಕರು ಸೇವೆಗೆ ಸದಾ ಸಿದ್ಧರಾಗಿರುವುದು ಸೇವಾ ಬದ್ಧತೆ. ಜಾರ್ಖಂಡ್ ರಾಜ್ಯದಲ್ಲಿ ಹಿಂದುಳಿದ ಪ್ರದೇಶವೊಂದರಲ್ಲಿ ಸ್ವಯಂ ಸೇವಕರು ಮಾಡಿದ ಸಮಾಜ ಸೇವೆ ಅನನ್ಯ. ಶಿಕ್ಷಣ ಪ್ರಸಾರ, ರಕ್ತದಾನ, ಆರೋಗ್ಯ ಶಿಬಿರ, ನದಿ ಸಂರಕ್ಷಣೆ, ಪರಿಸರ ಸಂರಕ್ಷಣೆ, ಅಂಗವಿಕಲರಿಗೆ ಅಭಯ, ಆದಿವಾಸಿಗಳ ಕಲ್ಯಾಣ, ಅನಾಥ ಮಕ್ಕಳ ಕಲ್ಯಾಣ ಹೀಗೆ ಅನೇಕ ಸೇವಾ ಚಟುವಟಿಕೆಗಳಲ್ಲಿ ಸಂಘ ತೊಡಗಿಸಿಕೊಂಡಿದೆ ಎಂದರು.

ಮುಖಂಡರಾದ ಚಿದಂಬರ ಕರಮಣಕರ, ಅರುಣ ಶಹಾಪುರ, ರಮೇಶ ಭೂಸನೂರ, ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಡಾ. ಬಾಬು ರಾಜೇಂದ್ರ ನಾಯಕ ಹಾಗೂ ಸಾವಿರಾರು ಗಣವೇಷಧಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net