

ಸವಣೂರ: ಪ್ರಾಥಮಿಕ ಹಂತದಿಂದಲ್ಲಿಯೇ ಮಕ್ಕಳಲ್ಲಿರುವಂತಹ ಪ್ರತಿಭೆಗಳಿಗೆ ಸೂಕ್ತವಾದ ಪ್ರೋತ್ಸಾಹ ನೀಡಬೇಕು ಎಂದು ಸಿಆರ್ಪಿ ದಾವಲ್ವುಲ್ಲಿಕ ಇಂಗಳಗಿ ಅಭಿಪ್ರಾಯಪಟ್ಟರು.
ತಾಲೂಕಿನ ಯಲವಿಗಿ ಗ್ರಾಮದ ಸಾಧನೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಗತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಕ್ಲಸ್ಟರ್ ಮಟ್ಟದ ಶಾಲೆಗಳ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ದೇಶಭಕ್ತಿ ಹಾಗೂ ಪ್ರತಿಭಾ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಜೀವನದುದ್ದಕ್ಕೂ ಅನುಸರಿಸಿಕೊಂಡು ಹೋದರೆ, ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ, ದೈವ ಭಕ್ತಿ ಎಂಬುದು ತಾನಾಗಿಯೇ ಹೊರಬರುತ್ತದೆ. ಬಹುಶಃ ಪ್ರಾಚೀನ ಕಾಲದಿಂದಲೂ ನಮ್ಮ ದೇಶ ಇನ್ನೂ ಜಗತ್ತು ಕಣ್ಣು ತೆರೆಯುವುದಕ್ಕಿಂತ ಪೂರ್ವದಲ್ಲಿಯೇ ವಿಶ್ವವಿದ್ಯಾಲಯಗಳು ತಲೆ ಎತ್ತಿದಂತಹ ನಾಡು ನಮ್ಮದು. ದೇಶಕ್ಕೋಸ್ಕರ ಪ್ರಾಣ ಕೊಟ್ಟಂತಹ ವೀರಭೂಮಿ, ತ್ಯಾಗಭೂಮಿ ನಮ್ಮ ಭಾರತ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಧನೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿ, ಮಕ್ಕಳು ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಉದಾತ್ತ ಭಾವ ಬೆಳೆಸಿಕೊಳ್ಳಬೇಕಿದೆ. ಸೋಲು ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಮುಖ್ಯಶಿಕ್ಷಕಿ ನಿರ್ಮಲಾ ತೆಂಬದಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶಭಕ್ತಿ ಹಾಗೂ ಪ್ರತಿಭಾ ಹಬ್ಬದಲ್ಲಿ 7 ಶಾಲೆಯ ಮಕ್ಕಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ರಸಪ್ರಶ್ನೆ, ದೇಶಭಕ್ತಿ ಗೀತೆ, ಅಭಿನಯ ಗೀತೆಗಳ ಪ್ರದರ್ಶನ, ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಆಕರ್ಷಕ ಬಹುಮಾನ ವಿತರಿಸಿ ಉತ್ತೇಜಿಸಲಾಯಿತು.
ಆಡಳಿತ ಮಂಡಳಿ ಸದಸ್ಯ ಮಹದೇವಪ್ಪ ಗಡೆಪ್ಪನವರ ಶಿಕ್ಷಕ ಮಂಜುನಾಥ ಕೊರಡೂರ, ಉದ್ಯಮಿ ಯೋಗೇಂದ್ರ ಜಂಬಗಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಶ್ರೀಪಾದಗೌಡ ಪಾಟೀಲ, ಮಹಾಂತೇಶ ಎಸ್.ಟಿ., ಎಸ್.ಎಂ. ಮೂಲಿಮನಿ ಮಹಾಂತೇಶ, ವಿದ್ಯಾ ಉಮಚಗಿ, ಸಹನಾ ಯಲವಿಗಿ, ಕಸ್ತೂರಿ ಪಿ.ಕೆ., ಶ್ವೇತಾ ಪಾಟೀಲ, ಸಿದ್ದಲಿಂಗಪ್ಪ ಜಟಾರ್ ಹಾಗೂ ಇತರರಿದ್ದರು. ಶಿಕ್ಷಕರಾದ ಚನ್ನಬಸನಗೌಡ ಬಿ.ಎನ್., ಸಂಗೀತಾ ನಾಯಕ ಹಾಗೂ ಸುಮಿತ್ರಾ ಎಂ. ಕಾರ್ಯಕ್ರಮ ನಿರ್ವಹಿಸಿದರು.