

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ದೇಶ ಹಬ್ಬಗಳ ತವರೂರಾಗಿದೆ. ಮಕರ ಸಂಕ್ರಾಂತಿ ಇಡೀ ದೇಶದಾದ್ಯಂತ ಆಚರಿಸುವ ಹಬ್ಬ. ಹಬ್ಬದ ಆಚರಣೆಯಿಂದ ಜನರಲ್ಲಿ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯ ಹೆಚ್ಚಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯಕಾರಿಣಿ ಸದಸ್ಯ ಸಂತೋಷ ಪೂಜಾರಿ ಅಭಿಪ್ರಾಯಪಟ್ಟರು.
ನಗರದ ಗರಗ ರಸ್ತೆ ಮಾಧವ ನಗರದ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಸಂಕ್ರಾಂತಿ ಉತ್ಸವದಲ್ಲಿ ಮಾತನಾಡಿದ ಅವರು, ಸಂಕ್ರಾಂತಿ ದಿನದಂದು ಸಂಬಂಧಿಕರು, ಸ್ನೇಹಿತರು ಒಟ್ಟಿಗೆ ಸೇರುತ್ತಾರೆ. ಸಿಹಿ ಪದಾರ್ಥಗಳನ್ನು ಒಬ್ಬರಿಗೊಬ್ಬರು ಹಂಚಿ ತಿನ್ನುವುದರಿಂದ ಪರಸ್ಪರ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಆದರೆ ಪ್ರಸ್ತುತ ಕಾಲದಲ್ಲಿ ಹಬ್ಬಗಳ ಆಚರಣೆಯು ಹಿಂದಿನ ಸಂಭ್ರಮ, ಸಡಗರವನ್ನು ಕಳೆದುಕೊಳ್ಳುತ್ತಿದೆ. ಆ ಸಂಭ್ರಮ, ಸಡಗರವನ್ನು ಮರಳಿ ತರುವ ಪ್ರಯತ್ನವನ್ನು ನಾವು ಮಾಡಬೇಕಿದೆ ಎಂದರು.
ಉಪ ಪ್ರಾಚಾರ್ಯ ಕೃಷ್ಣ ಜೋಶಿ, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು. ಶ್ರೇಯಸ್ ಬಾರಕೇರ ಸ್ವಾಗತಿಸಿದರು. ಕಾತಿರ್ಕ ಕೆ. ನಿರೂಪಿಸಿದರು.