

ನಂಜನಗೂಡು: ಸ್ವಾತಂತ್ರೃ ನಂತರದಲ್ಲಿ ದೇಶದಲ್ಲಿ ಆಹಾರ ಕೊರತೆ ಎದುರಾಗಿದ್ದ ಸಂದರ್ಭ ತಳಿ ಶಾಸ್ತ್ರಜ್ಞ ಎಂ.ಎಸ್.ಸ್ವಾಮಿನಾಥನ್ ಅವರು ತಳಿ ಕ್ರಾಂತಿ ಮೂಲಕ ಭಾರತವನ್ನು ಆಹಾರ ಭದ್ರತೆಯಲ್ಲಿ ಸ್ವಾವಲಂಬಿಯಾಗಲು ಕಾರಣೀಭೂತರಾದರು ಎಂದು ಸಾಮೂಹಿಕ ನಾಯಕತ್ವ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಹೇಳಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಸಾಮೂಹಿಕ ರೈತ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಹಸಿರು ನಮನ ಶ್ರದ್ಧಾಂಜಲಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರೃ ನಂತರ ಅಮೆರಿಕದಿಂದ ಕೆಂಪು ಜೋಳ ಮತ್ತು ಗೋಧಿಯನ್ನು ಆಮದು ಮಾಡಿಕೊಂಡು ಹಂಚಿಕೆ ಮಾಡಲಾಗುತ್ತಿತ್ತು. ಎಂ.ಎಸ್.ಸ್ವಾಮಿನಾಥನ್ ಅವರು ಕೃಷಿಯಲ್ಲಿ ಬದಲಾವಣೆ ತಂದಿದ್ದರಿಂದಾಗಿ ಆಹಾರ ಉತ್ಪಾದನೆ ಹೆಚ್ಚಾಗಿ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಗಳಿಸಲು ಸಾಧ್ಯವಾಯಿತು ಎಂದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಇಮ್ಮಾವು ರಘು ಮಾತನಾಡಿ, ತಾಲೂಕು ಆಡಳಿತ ಎಂಪಿಎಂಸಿ ಆವರಣದಲ್ಲಿ ಪ್ರೊ.ನಂಜುಂಡಸ್ವಾಮಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ನಗರದ ಯಾವುದಾದರೊಂದು ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಶಿವಕುಮಾರ್ ಕಾಸನೂರು ಸ್ವಾಮಿನಾಥನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್‌ರಾವ್, ಮುಖಂಡರಾದ ದೊಡ್ಡಯ್ಯ, ಶಿವಣ್ಣ, ನಾಗರಾಜು, ಶ್ವೇತಾ, ಶೈಲಜಾಹಲವರು ಇದ್ದರು.