ಶ್ರೀಮಂತ ಸಂಸ್ಕೃತಿಯಿಂದ ಭಾರತಕ್ಕೆ ಶ್ರೇಷ್ಠಸ್ಥಾನ

14_Krt_ph_01
Published on

ಕೊರಟಗೆರೆ: ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆಯಿಂದ ಇಡೀ ವಿಶ್ವವೇ ದೇಶವನ್ನು ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿ ನೋಡುತ್ತವೆ ಎಂದು ಶಾಸಕ ಡಾ. ಜಿ ಪರಮೇಶ್ವರ್ ಹೇಳಿದರು.

ತಾಲೂಕಿನ ಸಿ.ಎನ್ ದುರ್ಗ ಹೋಬಳಿಯ ಗೌಜಗಲ್ಲು ಗ್ರಾಮದಲ್ಲಿ ಶನಿವಾರ ಆಂಜನೇಯ ಸ್ವಾಮಿ ಟ್ರಸ್ಟ್‌ನ ದಶವಾರ್ಷಿಕ ಸಮಾರಂಭ ಮತ್ತು ಸಮಾಜಸೇವಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿರುವ ಧಾರ್ಮಿಕ ಕ್ಷೇತ್ರಗಳು, ವಿದ್ವಾಂಸರು, ಸಾಧುಸಂತರು ಹಾಗೂ ತತ್ವ ಸಿದ್ಧಾಂತಗಳು ದೇಶವನ್ನು ಅತ್ಯುನ್ನತ ಸ್ಥಾನಕ್ಕೆ ಭಾಜನವಾಗುವಂತೆ ಮಾಡಿವೆ ಎಂದು ಬಣ್ಣಿಸಿದರು.

ಆಶೀರ್ವಚನ ನೀಡಿದ ಸಿದ್ಧರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ದೇಶದಲ್ಲಿ ರಾಮನಿಲ್ಲದ ಗ್ರಾಮಗಳಿವೆ, ಆದರೆ ಹನುಮನಿಲ್ಲದ ಗ್ರಾಮಗಳಿಲ್ಲ. ಇದು ಭಕ್ತನಿಗೆ ಇರುವ ಶಕ್ತಿಯಾಗಿದೆ. ದೇವರಲ್ಲಿ ನಂಬಿಕೆಯಿಟ್ಟರೆ ದೇವರಿಗಿಂತ ಶ್ರೇಷ್ಠ ವ್ಯಕ್ತಿಯಾಗಿ ಜಗತ್ತಿನಲ್ಲಿ ಚಿರಾಯುವಾಗಿರುತ್ತಾನೆ ಎನ್ನುವುದಕ್ಕೆ ಆಂಜನೇಯನಿಗಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದರು.

ದೇಶದ ಮೇಲೆ ಕರೊನಾ ದಾಳಿ ಅಷ್ಟೊಂದು ಕ್ರೂರವಾಗಿಲ್ಲ, ಇದು ಈ ಮಣ್ಣಿಗೆ ಇರುವ ಶಕ್ತಿಯಾಗಿದೆ. ದೇವಾಲಯಗಳು ಶಕ್ತಿಕೇಂದ್ರಗಳಾಗಿವೆ, ಅವುಗಳ ರಕ್ಷಣಗೆ ನಮ್ಮೆಲ್ಲರ ಜವಾಬ್ದಾರಿ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ಆತ್ಮದ ಸಾಕ್ಷಾತ್ಕಾರಕ್ಕೆ ಗುರುಪಥವನ್ನು ಅನುಸರಿಸಬೇಕು. ಪ್ರತಿಯೊಬ್ಬರಲ್ಲಿಯೂ ಆತ್ಮಜ್ಯೋತಿ ಇರುತ್ತದೆ, ಇದನ್ನು ಅರಿತು ಗುರುಪಥದಲ್ಲಿ ಸಾಗಬೇಕು ಎಂದು ತುಮಕೂರಿನ ಸರಪಳಿ ಮಠದ ಜಗದ್ಗುರು ಜ್ಞಾನಾನಂದಗಿರಿ ಸ್ವಾಮೀಜಿ ಸಲಹೆ ನೀಡಿದರು.

ತಾಪಂ ಉಪಾಧ್ಯಕ್ಷ ವೆಂಕಟಪ್ಪ, ಟ್ರಸ್ಟ್ ಅಧ್ಯಕ್ಷ ಸಿದ್ದಗಿರಿ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಸೋಮಶೇಕರ್, ತಾಲೂಕು ರೋಟರಿ ಅಧ್ಯಕ್ಷೆ ಮಂಜುಳಾರಾದ್ಯ, ಸಿದ್ಧರಬೆಟ್ಟ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಜಿ ಕೃಷ್ಣ, ಬೆಂಡೊಣೆ ವಿಎಸ್‌ಎಸ್‌ಎನ್ ಅಧ್ಯಕ್ಷ ಶಿವಲಿಂಗಯ್ಯ, ತಾಲೂಕು ಕಲಾವಿದರ ಸಂದ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ಪರ್ವತಯ್ಯ, ಎಂ.ವಿ ನಟರಾಜು, ಚಿಕ್ಕಣ್ಣ, ತಿರುಮಲೇಶ್ವರ, ಅರಕೆರೆ ಮಂಜುನಾಥ್, ಸಿದ್ದಗಂಗಯ್ಯ ಮತ್ತಿತರರು ಇದ್ದರು.

ದೇಗುಲ ಸಮಿತಿಯ ಮನವಿಯಂತೆ ಗೌಜಗಲ್ಲು ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಅನುದಾದಲ್ಲಿ 5 ಲಕ್ಷ ರೂ. ತುಂಬಾಡಿಯಿಂದ ನೇಗಲಾಲ ವರೆಗೆ ರಸ್ತೆ, ಸಿದ್ಧರಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಡಾ.ಜಿ.ಪರಮೇಶ್ವರ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net