

ಹಳಿಯಾಳ: ಭಾರತವು ಒಬ್ಬ ಬಲಿಷ್ಠ ಹಾಗೂ ಸಶಕ್ತ ಪ್ರಧಾನಿಯ ಕೈಯಲ್ಲಿದೆ. ದೇಶವು ಎಲ್ಲ ರಂಗಗಳಲ್ಲಿಯೂ ಅಭಿವೃದ್ಧಿಯ ಪಥದಲ್ಲಿ ಸಾಗಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೆಲವೇ ವರ್ಷಗಳಲ್ಲಿ ಭಾರತ ವಿಶ್ವಗುರುವಾಗುವಲ್ಲಿ ದಾಪುಗಾಲು ಇಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶ ಆರ್ಥಿಕತೆಯಲ್ಲಿ 5ನೇ ಸ್ಥಾನ, ಚಂದ್ರಯಾನದಲ್ಲಿ 4ನೇ ಸ್ಥಾನದಲ್ಲಿದ್ದು, ಮುಂದೆ ಭಾರತ ಮೋದಿಯವರ ನಾಯಕತ್ವದಲ್ಲಿ ವಿಶ್ವದಲ್ಲೇ ಪ್ರತಿಯೊಂದು ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ಬಂದು ಭಾರತ ವಿಶ್ವ ಗುರು ಆಗಲಿದೆ ಎಂದರು.
ಇಡೀ ಜಗತ್ತೇ ಭಾರತವು ಸ್ವಚ್ಛತೆಯ ಬಗೆಗೆ ತೋರಿದ ಕಾಳಜಿ ಮತ್ತು ತೆಗೆದುಕೊಂಡ ಅವಶ್ಯಕ ನಿಲುವುಗಳಿಗೆ ಕೊಂಡಾಡುವಂತೆ ಮಾಡಿದ ಸಾಧನೆಯ ಹಿಂದಿನ ಪ್ರೇರಕ ಶಕ್ತಿಗಳಾದ ಪೌರ ಕಾರ್ವಿುಕರಿಗೆ ಸನ್ಮಾನಿಸುವುದಕ್ಕಿಂತ ಬೇರೆ ಗೌರವ ಮತ್ತೊಂದಿಲ್ಲ. ಹೀಗಾಗಿ ಪ್ರೇರಕರ ಜೊತೆಗೆ ಪ್ರೇರಕಶಕ್ತಿಗಳಿಗೂ ಸ್ಮರಿಸಿ ಸನ್ಮಾನಿಸುವ ಪರಿಪಾಠವನ್ನು ಬಿಜೆಪಿ ಬೆಳೆಸಿಕೊಂಡಿದೆ ಎಂದರು.
ಪಟ್ಟಣದ ಮಹಾಗಣಪತಿ ದೇವಸ್ಥಾನದಲ್ಲಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಮೋದಿ ಜೀ ಅವರು ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸುವ ಸಲುವಾಗಿ ಸಂಕಲ್ಪ ಮಾಡಿ ಪ್ರಾರ್ಥಿಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಜನ್ಮದಿನದ ಅಂಗವಾಗಿ ಹಳಿಯಾಳ ಪುರಸಭೆಯ ಪೌರ ಕಾರ್ವಿುಕರನ್ನು ಸನ್ಮಾನಿಸಿ ಉಡುಗೊರೆ ನೀಡುವ ಮೂಲಕ ಗೌರವಿಸಲಾಯಿತು.
ಪಕ್ಷದ ತಾಲೂಕಾಧ್ಯಕ್ಷ ಗಣಪತಿ ಕರಂಜೇಕರ, ಪ್ರಮುಖರಾದ ಅನಿಲ ಮುತ್ನಾಳೆ, ವಿ.ಎಂ. ಪಾಟೀಲ, ಉದಯ ಹೂಲಿ, ಸಂತೋಷ ಘಟಕಾಂಬಳೆ, ಚಂದ್ರಕಾಂತ ಕಮ್ಮಾರ, ಪ್ರಮುಖರಾದ ಶಿವಾಜಿ ನರಸಾನಿ, ವಾಸುದೇವ ಪೂಜಾರಿ, ವಿಲಾಸ ಯಡವಿ, ಯಲ್ಲಪ್ಪ ಹೊನ್ನೋಜಿ, ಜಯಲಕ್ಷ್ಮಿ ಚವ್ವಾಣ ಇತರರಿದ್ದರು.