

ಕೆ.ಆರ್.ಪೇಟೆ : ಸ್ವಾತಂತ್ರ್ಯ ಪಡೆದ ನಂತರ ಭಾರತವು ವಿಶ್ವದ ಬಲಿಷ್ಠ ರಾಷ್ಟ್ರ ಶಕ್ತಿಯಾಗಿ ಹೊರ ಹೊಮ್ಮುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ಸ್ವಾತಂತ್ರ್ಯ ಪಡೆಯಲು ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ತ್ಯಾಗ ಬಲಿದಾನಗಳ ಸಂಕೇತವೇ ಸ್ವಾತಂತ್ರ್ಯ. ಮಂಡ್ಯ ಜಿಲ್ಲೆಯಲ್ಲಿ ಹಲವಾರು ಜನ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಇದರ ನೆನಪಿಗಾಗಿ ಮದ್ದೂರಿನ ಶಿವಪುರದ ಸತ್ಯಾಗ್ರಹ ನಿರ್ಮಾಣ ಮಾಡಲಾಗಿದೆ. ತಾಲೂಕಿನ ಹೊಸಹೊಳಲಿನ ಗೋವಿಂದೇಗೌಡ, ಗೋವಿಂದಶೆಟ್ಟರು, ಬಳ್ಳೇಕೆರೆಯ ಪುಟ್ಟಸ್ವಾಮೀಗೌಡ, ಶೀಳನೆರೆಯ ಕೆ.ಎಸ್.ಬೋರೇಗೌಡ, ಮಡುವಿನಕೋಡಿ ಹಾಲೇಗೌಡ, ಸಿದ್ದೇಗೌಡ, ಕಿಕ್ಕೇರಿಯ ನರಸೇಗೌಡ, ಬಿದರಹಳ್ಳಿಯ ಶಿವರಾಮಯ್ಯ ಸೇರಿದಂತೆ ಹಲವಾರು ಗ್ರಾಮಗಳ ಹೋರಾಟಗಾರರನ್ನು ಸ್ಮರಿಸಿದರು.
ನಮ್ಮ ಹಿರಿಯರು ತೋರಿಸಿದ ಹಾದಿಯಲ್ಲಿ ನಾವೆಲ್ಲರೂ ಸಾಗಿ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಬೇಕು. ದೇಶ ಕಾಯುವ ಸೈನಿಕರು, ಅನ್ನ ಕೊಡುವ ರೈತರನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಭಾರತ ದೇಶ ವಿಜ್ಞಾನ, ತಂತ್ರಜ್ಞಾನ, ಕೃಷಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಎಲ್ಲ ಕ್ಷೇತ್ರಕ್ಕೂ ಜಗತ್ತಿನ ಗುರುವಾಗುವ ಹಂತಕ್ಕೆ ಬಂದು ನಿಂತಿದೆ. ಇಷ್ಟಾದರೂ ನಮ್ಮೊಳಗಿನ ಅಸಮಾನತೆ ತೊಲಗಿಲ್ಲ. ಜಾತೀಯತೆ ಮತ್ತು ಧರ್ಮಾಂದತೆ ದುರ್ಬಲವಾಗಿಲ್ಲ. ನಾವೆಲ್ಲರೂ ಜಾತ್ಯತೀತ ಪರಿಕಲ್ಪನೆಯನ್ನು ಬೆಳೆಸಿಕೊಂಡು ದೇಶ ಮೊದಲು ಎನ್ನುವ ಸಿದ್ದಾಂತದ ಅಡಿ ಮುನ್ನಡೆಯಬೇಕಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಆದರ್ಶ ಮಾತನಾಡಿ, ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡಿಕೊಂಡು ಬಲಿಷ್ಠ ಭಾರತ ನಿರ್ಮಿಸಲು ನಾವೆಲ್ಲರೂ ಕೈ ಜೋಡಿಸಬೇಕೆಂದರು.
ತಾಲೂಕಿನ ಮಡುವಿನಕೋಡಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹಾಲೇಗೌಡ ಸೇರಿದಂತೆ ಹಲವರನ್ನು ಅವರವರ ಮನೆಯಲ್ಲಿಯೇ ತಾಲೂಕು ಆಡಳಿತದ ವತಿಯಿಂದ ಗೌರವಿಸಲಾಯಿತು. ದಿನಾಚರಣೆಯ ಅಂಗವಾಗಿ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಶಾಸಕ ಮಂಜು ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಮೆರವಣಿಗೆಯಲ್ಲಿ ಸಾಗಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ನೂರಾರು ಶಾಲಾ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು. ಸ್ವಾತಂತ್ರ್ಯ ದಿನದ ಮಹತ್ವದ ಕುರಿತು ಕೆಪಿಎಸ್ ಶಾಲೆಯ ಶಿಕ್ಷಕ ಗುರುಲಿಂಗೇಗೌಡ ವಿಶೇಷ ಉಪನ್ಯಾಸ ನೀಡಿದರು.
ತಾಪಂ ಇಒ ಸುಷ್ಮಾ, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಎಚ್.ಕೆ.ಅಶೋಕ್, ಪುರಸಭಾ ಮುಖ್ಯಾಧಿಕಾರಿ ರಾಜು, ಸದಸ್ಯರಾದ ಗಿರೀಶ್, ತಿಮ್ಮೇಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಸಿಡಿಪಿಒ ಅರುಣ್‌ಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ನಯನಜ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಶಿವಪ್ಪ, ಜಯ ಕರ್ನಾಟಕ ಸಂಘಟನೆಯ ಸೋಮಶೇಖರ್, ಬಿಇಒ ಸೀತಾರಾಮು, ಎಡಿಎಡಿ ಯತೀಶ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಬಿಸಿಎಂ ವೆಂಕಟೇಶ್, ಬಸ್ತಿರಂಗಪ್ಪ, ಎಡಿಎಲ್‌ಆರ್ ಸಿದ್ದಯ್ಯ, ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಜರಿದ್ದರು.