

ರಬಕವಿ/ಬನಹಟ್ಟಿ: ಜಲ ಒಂದೇ ಇದ್ದರೂ ನೂರಾರು ಪ್ರಕಾರದ ಸ್ವಾದ, ಜಗತ್ತಿನ ಎಲ್ಲ ಅರಣ್ಯಗಳಲ್ಲಿ ಹೊಂದಿರುವ ಸಸ್ಯ, ಪ್ರಾಣಿ ಸಂಪತ್ತು ದೇಶವೊಂದರಲ್ಲೇ ಕಾಣುವ ಅದೃಷ್ಟ. ಪಕ್ಷಿ, ಕ್ರಿಮಿಕೀಟ ಸೇರಿ ಬೆಳೆಗಳಲ್ಲಿಯೂ ಲಕ್ಷಾಂತರ ಪ್ರಕಾರಗಳನ್ನು ಹೊಂದಿದ ಶ್ರೀಮಂತ ರಾಷ್ಟ್ರ ಭಾರತವಾಗಿದೆ ಎಂದು ಕೊಲ್ಲಾಪುರ ಕನ್ಹೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಹೇಳಿದರು.
ನಗರದ ಶ್ರೀ ಕಾಡಸಿದ್ಧೇಶ್ವರ ದೇವಸ್ಥಾನದ ಕಲಶಾರೋಹಣ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿವಿಧತೆಯಿಂದ ಕಂಗೊಳಿಸುತ್ತ ಅನೇಕ ಸಾಂಸ್ಕೃತಿಕವಾಗಿ 600ಕ್ಕೂ ಅಧಿಕ ಜನ ಜಾತಿಯ ಪಂಗಡಗಳಲ್ಲಿ 22 ಭಾಷೆಗಳಿಂದ, ಅನೇಕ ವೇಷ-ಭೂಷಣ ಹಾಗೂ ಆಹಾರ ಪದ್ಧತಿ ಹಾಗೂ ಋಷಿ, ದಾರ್ಶನಿಕರು, ಕಲಾವಿದ, ಸಂಗೀತ, ನೃತ್ಯ, ಭಜನೆ ಹೀಗೆ ಅನೇಕ ವಿಶೇಷತೆ ಹೊಂದಿರುವ ಜಗತ್ತಿನ ಏಕೃಕ ರಾಷ್ಟ್ರ ಭಾರತವಾಗಿದೆ ಎಂದರು.
ಆಗಿನ ಕಾಲದಲ್ಲಿ ದೇಶದ ರಾಜರುಗಳು ಜನಹಿತಕ್ಕಾಗಿಯಿದ್ದರೆಂಬುದಕ್ಕೆ ಅವರ ಆಡಳಿತ ಅವಧಿಗಳೇ ಸಾಕ್ಷಿ. 300 ರಿಂದ 350 ವರ್ಷಗಳವರೆಗೆ ಆಡಳಿತ ನಡೆಸಿದ ಪುರಾವೆಗಳಿವೆ. ಪರಸ್ಪರ ಪ್ರೀತಿ, ಸದ್ಭಾವವನ್ನು ಸಂಸ್ಕಾರದಿಂದ ಕಂಡವರು ಭಾರತೀಯರು. ನಿಸರ್ಗ ಉಪಾಸಕರಾಗಿ, ಅಧ್ಯಾತ್ಮ, ಧರ್ಮಗಳಲ್ಲಿ ಸಾಕಷ್ಟು ಸ್ವಾತಂತ್ರೃ ಹೊಂದಿದ್ದು, ಅವರವರ ತೃಪ್ತಿ (ರುಚಿ)ಗೆ ತಕ್ಕಂತೆ ದೇವರನ್ನು ಕಾಣುವಲ್ಲಿ ನೆಮ್ಮದಿ ಕಂಡಿದ್ದಾರೆ ಎಂದರು.
ದೇಶದ ಒಗ್ಗಟ್ಟಿಗೆ ದೇವಸ್ಥಾನಗಳೇ ಕಾರಣ
ಬ್ರಿಟಿಷರು ಇಡೀ ದೇಶ ವಿಭಜಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ದೇವಸ್ಥಾನಗಳೇ ಆಗಿವೆ. ಎಲ್ಲ ಜಾತಿ, ಧರ್ಮ, ಪಂಥಗಳನ್ನು ಒಗ್ಗೂಡಿಸುವ ಶಕ್ತಿ ದೇವಾಲಯಕ್ಕಿದ್ದರಿಂದಲೇ ದೇಶ ಇಂದಿಗೂ ಸಮೃದ್ಧ ಭಾರತವಾಗಿ ಮುನ್ನಡೆಯುತ್ತಿದೆ ಎಂದು ಕಣೇರಿ ಶ್ರೀಗಳು ನುಡಿದರು.
ಹಳೇ-ಹುಬ್ಬಳ್ಳಿಯ ಶಿವಶಂಕರ ಶ್ರೀಗಳು, ಮರೇಗುದ್ದಿಯ ನಿರುಪಾಧೀಶ್ವರ ಶ್ರೀ, ರಬಕವಿಯ ಗುರುಸಿದ್ಧೇಶ್ವರ ಶ್ರೀ, ಮಹಾಲಿಂಗಪುರದ ಸಹಜಾನಂದ ಶ್ರೀ, ಜಮಖಂಡಿಯ ಗೌರಿ ಶಂಕರ ಶ್ರೀ, ಚಿಮ್ಮಡದ ಪ್ರಭು ಸ್ವಾಮೀಜಿ, ಆಳಂದದ ಚನ್ನಬಸವ ಪಟ್ಟದೇವರು, ನೀರಲಕೇರಿಯ ಘನಲಿಂಗ ಶ್ರೀ ಹಾಗೂ ಶಿರೋಳದ ಶಂಕರಾರೂಢ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಪಾದ ಬಾಣಕರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿದ್ದು ಸವದಿ, ಸಂಗಮೇಶ ನಿರಾಣಿ, ಶ್ರೀಶೈಲ ದಭಾಡಿ ಮಾತನಾಡಿದರು.
ಸಿದ್ದು ಕೊಣ್ಣೂರ, ಡಾ. ಪದ್ಮಜೀತ್ ನಾಡಗೌಡ ಪಾಟೀಲ, ಜಿ.ಎಸ್. ನ್ಯಾಮಗೌಡ, ಸಿದ್ಧರಾಜ ಪೂಜಾರಿ, ಶಂಕರ ಜುಂಜಪ್ಪನವರ, ಸಿದ್ಧನಗೌಡ ಪಾಟೀಲ, ಮಲ್ಲಿಕಾರ್ಜುನ ತುಂಗಳ, ಭೀಮಶಿ ಮಗದುಮ್, ವೀರುಪಾಕ್ಷ ಕೊಕಟನೂರ, ರಕ್ಷಿತಾ ಈಟಿ, ಸಿದ್ರಾಮಪ್ಪ ಸವದತ್ತಿ, ಬಸವಂತ ಜಾಡಗೌಡ, ವಿಜಯಕುಮಾರ ಜುಂಜಪ್ಪನವರ, ರಾಜಶೇಖರ ಮಾಲಾಪುರ, ಈಶ್ವರ ಬಿದರಿ, ಗಂಗಪ್ಪ ಮುಗತಿ ಇತರರಿದ್ದರು.