

ಶಿವಮೊಗ್ಗ: ವಿಶ್ವದ ಭೂಪಟದಲ್ಲಿ ಹಲವು ಭಾಷೆ, ಧರ್ಮ, ಪ್ರಾಂತ್ಯಗಳಿಂದ ಕೂಡಿರುವ, ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ ಭಾರತ. ಐಕ್ಯತೆ, ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಬಲಿಷ್ಠ ರಾಷ್ಟ್ರವಾಗಿ ಬೆಳೆದು ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಡಿಎಆರ್ ಮೈದಾನದಲ್ಲಿ ಭಾನುವಾರ ಜಿಲ್ಲಾ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತವನ್ನು ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ಶ್ರಮಿಸಿದ ಅನೇಕ ನಾಯಕರು, ಯೋಧರು ಹಾಗೂ ದೇಶಾಭಿಮಾನಿಗಳನ್ನು ನೆನೆಯುವುದು ಮತ್ತು ಅವರು ಆಶಯದಂತೆ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ಪ್ರಮುಖರಾದ ಜಿ.ಪಲ್ಲವಿ, ಎಸ್.ರವಿಕುಮಾರ್, ಸಿ.ಎಸ್.ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಉಪಸ್ಥಿತರಿದ್ದರು.