

ಬಾದಾಮಿ: ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಮಾರ್ಗದರ್ಶಿಯಾದ ಶ್ರೇಷ್ಠ ಸಂವಿಧಾನ ನಮ್ಮದಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹೇಳಿದರು.
ಸ್ಥಳೀಯ ಕಾನೂನು ಸೇವಾ ಸಮಿತಿ ವಕೀಲರ ಸಂಘ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಎಸ್‌ಬಿಸಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸಂವಿಧಾನ ದಿನಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯಕ್ಕೆ ಸಂವಿಧಾನ ಅಡಿಪಾಯ ಹಾಕಿದ್ದು, ಪ್ರತಿಯೊಬ್ಬರೂ ಸಂವಿಧಾನ ಅರಿತು ಬದುಕು ನಿರ್ಮಿಸಿಕೊಳ್ಳಬೇಕೆಂದು ಹೇಳಿದರು.
ನ್ಯಾಯವಾದಿ ಎಸ್.ಎನ್. ದ್ಯಾವಣ್ಣವರ ಉಪನ್ಯಾಸ ನೀಡಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್. ಹಳಗೇರಿ, ವಕೀಲರ ಸಂಘದ ಅಧ್ಯಕ್ಷ ವಿ.ವಿ. ದೊಡ್ಡಪತ್ತಾರ, ಶಿಕ್ಷಕ ಎನ್.ಬಿ. ಶೀಲವಂತ, ವಿದ್ಯಾರ್ಥಿನಿ ಪ್ರತಿನಿಧಿ ಕುಮಾರಿ ಭಾರತಿ ರಾಠೋಡ ಉಪಸ್ಥಿತರಿದ್ದರು.
ಕುಮಾರಿ ಪ್ರತಿಭಾ ಕಂಬಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕೆ.ಬಿ. ಭಗವಂತಗೌಡ್ರ ಸ್ವಾಗತಿಸಿದರು. ಎಸ್.ಬಿ. ಬಡಿಗೇರ ನಿರೂಪಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.