ಶೇ.90ರಷ್ಟು ಆದಾಯ ತೆರಿಗೆ ಪಾವತಿಸುವ ಮಟ್ಟಕ್ಕೆ ಬೆಳೆದಾಗ ದೇಶ ವಿಕಸಿತ ಭಾರತ

mng--24 May BJP samvada
Published on

ಮಂಗಳೂರು: ಬಡತನ ನಿರ್ಮೂಲನೆ, ಯುವಜನತೆ, ರೈತರು ಮತ್ತು ಮಹಿಳೆಯರ ಸಬಲೀಕರಣ ದೇಶದ ಆರ್ಥಿಕತೆಯ ಆಧಾರ ಸ್ತಂಭಗಳು ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಸಿಎ ಪ್ರಶಾಂತ್ ಜಿ.ಎಸ್ ಹೇಳಿದ್ದಾರೆ.

ದ.ಕ ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ವತಿಯಿಂದ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ವಿಕಸಿತ ಭಾರತದತ್ತ ಭಾರತದ ಆರ್ಥಿಕತೆ’ ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಭಾರತವು ಅಮೆರಿಕಾದ ಆರ್ಥಿಕತೆಯ ಸನಿಹಕ್ಕೆ ಹೋಗಬೇಕಾದರೆ ಇದೇ ರೀತಿಯ ಬೆಳವಣಿಗೆ ಮುಂದಿನ 20 ವರ್ಷಗಳ ಕಾಲ ನಿರಂತರವಾಗಿ ಮುಂದುವರೆಯಬೇಕು. ದೇಶದ ಪ್ರತಿಯೋರ್ವರ ಆದಾಯ ಕೂಡ ಹೆಚ್ಚಾಗಬೇಕು. ಶೇ. 90ರಷ್ಟು ಮಂದಿ ಆದಾಯ ತೆರಿಗೆ ಪಾವತಿಸುವ ಮಟ್ಟಕ್ಕೆ ಬೆಳೆದಾಗ ದೇಶ ವಿಕಸಿತ ಭಾರತವಾಗಲಿದೆ ಎಂದವರು ಹೇಳಿದರು.

ಆರ್ಥಿಕ ತಜ್ಞ ರಾಜೇಶ್ ರಾವ್ ಎಂ. ಮಾತನಾಡಿ, ಭಾರತದ ಆರ್ಥಿಕತೆಯನ್ನು ಅಮೆರಿಕಾ, ಜಪಾನ್, ಜರ್ಮನಿ ಮೊದಲಾದ ದೇಶಗಳಿಗೆ ಹೋಲಿಸದೆ ಚೀನಾದ ಆರ್ಥಿಕತೆಗೆ ಹೋಲಿಸಬೇಕು. ಭಾರತದಂತೆಯೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾವನ್ನು ಗುರಿಯಾಗಿರಿಸಿಕೊಂಡು ಭಾರತದ ಆರ್ಥಿಕತೆ ಬೆಳೆಯಬೇಕಾಗಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು. ಭಾರತ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಕೊರೊನಾದಂತಹ ಸಂಕಷ್ಟದ ಸ್ಥಿತಿಯಲ್ಲಿಯೂ ದೃಢವಾಗಿ ನಿಂತಿದೆ. ದೇಶದ ನೈಜ ಆರ್ಥಿಕ ಸ್ಥಿತಿಯ ಬಗ್ಗೆ ತಜ್ಞರು ಸಾಮಾನ್ಯ ಜನರಿಗೆ ತಿಳಿಸಿಕೊಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಹಸಂಚಾಲಕ ಸಿಎ ಎಸ್.ಎಸ್.ನಾಯಕ್ ಅವರು ಸಂವಾದ ನಡೆಸಿಕೊಟ್ಟರು. ಅಕ್ಷಯ್ ಕಾರ್ಯಕ್ರಮ ನಿರ್ವಹಿಸಿದರು. ದೀಕ್ಷಾ ಶಾನುಭಾಗ್, ಮಾನಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net