

ಮೈಸೂರು: ಭಾರತವೆಂದರೆ ಸಂಸ್ಕೃತಿ ಸಂಪನ್ನವಾದ ಹಬ್ಬಗಳ ದೇಶವಾಗಿದ್ದು, ವರ್ಷಪೂರ್ತಿ ಒಂದಿಲ್ಲೊಂದು ಹಬ್ಬಗಳು, ಹರಿದಿನಗಳು, ಜಯಂತಿಗಳು, ದಿನಾಚರಣೆಗಳು ನಮ್ಮಲ್ಲಿ ಆಚರಣೆಯಲ್ಲಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಸಯ್ಯಜಿರಾವ್ ರಸ್ತೆಯ ಡಿ.ಬನುಮಯ್ಯ ಬಾಲಕಿಯರ ಪ್ರೌಢ ಶಾಲೆಯ ಆವರಣದಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವೆಲ್ಲವೂ ನಮ್ಮ ಪರಂಪರೆ ಯಾಗಿದ್ದು ಅದರಲ್ಲೂ ವಿಶೇಷವಾಗಿ ರಂಗೋಲಿ ನಮ್ಮ ಸಿರಿ ಸಂಸ್ಕೃತಿ ಎಂದರು.
ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಭಾವಂತರೇ ಆಗಿದ್ದು ಅವರೊಳಗೆ ಅನೇಕ ಬಗೆಯ ಕಲೆಗಳಿದ್ದು ಅವುಗಳಲ್ಲಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ರಂಗೋಲಿ ಕಲೆಗೆ ಬಹು ಮಹತ್ವದ ಸ್ಥಾನವುಂಟೆಂದರು.
ಸಂಕ್ರಾಂತಿ ವಿಶೇಷವಾಗಿ ರೈತರ ಬಾಳಿನ ಸುಗ್ಗಿ ಹಬ್ಬ. ಕೃಷಿಕರಿಗೆ ಇದು ಹಿಗ್ಗಿನ ಹಬ್ಬ. ಹೊಲ-ಗದ್ದೆಗಳ ಬೆಳೆ ಫಸಲಾಗಿ ದವಸ-ಧಾನ್ಯ ಗಳು ರೈತರ ಮನೆ ಸೇರಿ ಅನ್ನದಾತನ ಮುಖೇನ ಇಡೀ ದೇಶಕ್ಕೆ ಹಂಚಲ್ಪಟ್ಟು ನಾಡಿಗೆ ನಾಡೇ ಸಡಗರದಿಂದ ಹರ್ಶೋಲ್ಲಾಸಗೊಂಡು ಸಂಭ್ರಮಿಸುವ ಕಾಲವಿದು ಎಂದರು.
ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ 9ನೇ ತರಗತಿಯ ಪ್ರೀತಿ ಮತ್ತು 8ನೇ ತರಗತಿಯ ಸಿಂಚನ (ಪ್ರಥಮ), 10ನೇ ತರಗತಿಯ ಅಮೂಲ್ಯಶ್ರೀ ಮತ್ತು ವರ್ಷಿತಾ (ದ್ವಿತೀಯ), 8ನೇ ತರಗತಿಯ ಸ್ಫೂರ್ತಿ ಮತ್ತು10ನೇ ತರಗತಿಯ ಶ್ವೇತಾ (ತೃತೀಯ), 8ನೇ ತರಗತಿಯ ಚಂದನಾ, 9ನೇ ತರಗತಿಯ ರಚಿತಾ,10ನೇ ತರಗತಿಯ ಜಯಲಕ್ಷ್ಮೀಮತ್ತು ಸಂಜನಾ ದೂರ (ಸಮಾಧಾನಕರ) ಅವರಿಗೆ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಬಹುಮಾನ ವಿತರಿಸಿದರು.
ತೀರ್ಪುಗಾರರಾಗಿ ಶಿಕ್ಷಕಿ ಇಂದು ಅರಸ್ ಹಾಗೂ ಮಂಗಳಗೌರಮ್ಮ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಎಚ್.ಎಸ್.ತಿಪ್ಪೇಸ್ವಾಮಿ, ಶಿಕ್ಷಕರಾದ ಜಿ.ಟಿ.ಶ್ರೀನಿವಾಸಮೂರ್ತಿ, ಎಚ್.ಪಿ.ಹರೀಶ್,ಎಂ.ಚೇತನ, ಕೆ.ಎಂ.ಮಂಗಳಗೌರಮ್ಮ ,ಶಿವು, ಎಂ.ಎಸ್.ಸತೀಶ್, ಡಿ.ರೋಹಿತ್ ಇದ್ದರು.