

ಮುಂಡರಗಿ: ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಜಗತ್ತಿನೊಳಗೆ ಎಲ್ಲವೂ ಪ್ರಯೋಗಶೀಲತೆಗೆ ಒಳಪಟ್ಟಿದೆ. ಅಖಂಡ ಭಾರತದಲ್ಲಿ ಸ್ಥಾವರ ಲಿಂಗಪೂಜೆ ಇತ್ತು. ಈ ಪೂಜೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದು ಭಾರತ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಧರ್ಮ ಪ್ರವಚನದಲ್ಲಿ ಅವರು ಮಾತನಾಡಿದರು. ಇಡೀ ಜಗತ್ತಿನಲ್ಲಿ ಭಾರತ ದೇಶವು ಧಾರ್ಮಿಕ ಕ್ಷೇತ್ರದ ಮೂಲ ಬೇರು. ಈ ಕಲಿಯುಗ ಕಲಿಯುವಂತಹ ಯುಗವಾಗಿದೆ.
ತ್ರೇತಾಯುಗ, ಕೃತಯುಗ, ದ್ವಾಪರಯುಗ ಮತ್ತು ಈಗಿರುವ ಕಲಿಯುಗ ಈ ನಾಲ್ಕು ಯುಗಗಳಲ್ಲೂ ಸ್ಥಾವರ ಲಿಂಗಪೂಜೆ ಇತ್ತು ಎನ್ನುವುದನ್ನು ನಾವು ಕಾಣುತ್ತೇವೆ ಎಂದರು.
12ನೇ ಶತಮಾನದಲ್ಲಿ ಅನುಭವ ಮಂಟಪವು ದೇವರು ಮತ್ತು ಧರ್ಮದ ಬಗ್ಗೆ ಬಹಳಷ್ಟು ಸ್ಪಷ್ಟೀಕರಣ ಮಾಡಿದೆ. ಬಸವಣ್ಣನವರು ಹೆಣ್ಣು ಮಕ್ಕಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದರು.
ಶರಣರ ಕಾಯಕದಲ್ಲಿ ಬೇಧ-ಭಾವ, ತಾರತಮ್ಯ, ಮೇಲು -ಕೀಳು ಇಲ್ಲ ಎಂದರು. ವಿಶ್ವಗುರು ಬಸವಣ್ಣನವರು ಕಾಯಕಕ್ಕೆ ಘನತೆಯನ್ನು ತಂದುಕೊಟ್ಟರು ಎಂದರು.