

ಮಡಿಕೇರಿ: ಭಾರತವು ವಿಶ್ವದ ಬೃಹತ್ ಸಂವಿಧಾನ ಹೊಂದಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಹೇಳಿದರು.
ಕೊಡಗು ಜಿಲ್ಲಾಡಳಿತ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಅರ್ಥಪೂರ್ಣವಾಗಿ ಹಮ್ಮಿಕೊಂಡಿದ್ದ ೭೬ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತೀಯ ಸಂವಿಧಾನ ಜಾರಿಗೆ ಬಂದ ದಿನವನ್ನು ನಾವು ಗಣರಾಜ್ಯೋತ್ಸವ ದಿನವೆಂದು ಪ್ರತೀ ವರ್ಷ ಜ೨೬ ರಂದು ಆಚರಿಸುತ್ತೇವೆ. ಭಾರತವು ವಿಶ್ವದ ಒಂದು ಬೃಹತ್, ಯಶಸ್ವಿ, ಪ್ರಜಾಪ್ರಭುತ್ವವಾಗಿದೆ. ಭೂಸೇನೆ, ನೌಕಾ ಸೇನೆ ಮತ್ತು ವಾಯುಸೇನೆಗಳು ಪ್ರದರ್ಶನ ನೀಡುವ ಮೂಲಕ ದೇಶದ ಗೌರವವನ್ನು ಬಿಂಬಿಸುತ್ತವೆ. ಇಂದು ದೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳು ಸುಧಾರಿಸಿವೆ. ಬಡತನ ನಿರ್ಮೂಲನೆಯತ್ತ ಹೆಜ್ಜೆ ಇಡಲಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಲಾಗುತ್ತಿದೆ ಎಂದರು.
ಪ್ರಜಾಪ್ರಭುತ್ವದ ತಳಹದಿಯಾದ ಸಂವಿಧಾನವನ್ನು ಹಾಗೂ ಮಾನವ ಹಕ್ಕುಗಳನ್ನು ನೀಡಿದ ಈ ಸುದಿನದ ನೆನಪು ಅವಿಸ್ಮರಣೀಯ. ಪ್ರಥಮವಾಗಿ ಪ್ರಜಾತಂತ್ರ ವ್ಯವಸ್ಥೆಯ ಬೇರಿಗೆ ನೀರು ಸುರಿದು ತಮ್ಮ ಬದುಕು ಸವೆಸಿದ ಎಲ್ಲಾ ದೇಶಾಭಿಮಾನಿ ಬಂಧುಗಳನ್ನು ಸ್ಮರಿಸಿಕೊಳ್ಳುತ್ತೇನೆ ಎಂದ ಅವರು, ರಾಷ್ಟ್ರದ ಪ್ರಥಮ ಮಹಾ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರು ರಾಷ್ಟ್ರದ ಸೇನಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವುದು ಸ್ಮರಣೀಯವಾಗಿದೆ ಎಂದರು.
ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡವರ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಿದೆ. ಆ ನಿಟ್ಟಿನಲ್ಲಿ ಶಕ್ತಿ ಯೋಜನೆಯು ೨೦೨೩ ರ ಜೂ.೧೧ ರಂದು ಪ್ರಥಮ ಯೋಜನೆಯಾಗಿ ಜಾರಿಗೊಂಡಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸಿರುವುದು ವಿಶೇಷವಾಗಿದೆ.
ಕೊಡಗು ಜಿಲ್ಲೆಯಲ್ಲಿ ಒಟ್ಟು ೯೧,೧೬,೦೬೦ ಮಹಿಳಾ ಪ್ರಯಾಣೀಕರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಶೇಕಡಾ ೯೯.೨೨ ರಷ್ಟು ನೊಂದಣಿಯಾಗಿದೆ. ಒಟ್ಟಾರೆಯಾಗಿ ೧,೫೩,೯೩೩ ವಿದ್ಯುತ್ ಸಂಪರ್ಕಗಳು ಈ ಯೋಜನೆಯ ಫಲ ಪಡೆಯುತ್ತಿದ್ದು, ಇದುವರೆಗೂ ೬೩೩.೭೧ ಲಕ್ಷ ರೂ. ಸಹಾಯಧನ ಭರಿಸಲಾಗಿದೆ. ಯುವನಿಧಿ ಯೋಜನೆಯಡಿ ೧೪೨೭ ಮಂದಿ ಹೆಸರು ನೋಂದಾಯಿಸಿದ್ದು, ಇವರಲ್ಲಿ ೧೧೩೩ ಮಂದಿಗೆ ಡಿಬಿಟಿ ಮೂಲಕ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಗಾಮೀಣ ರಸ್ತೆಗಳ ಅಭಿವೃದ್ದಿಗೆ ಹಾಗೂ ದುರಸ್ತಿಗೆ ಆದ್ಯತೆ ನೀಡಲಾಗುತ್ತಿದೆ. ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಜಿಲ್ಲೆಗೆ ಒಟ್ಟು ರೂ. ೪೩೯.೯೩ ಲಕ್ಷಗಳು ಹಂಚಿಕೆಯಾಗಿದೆ. ಇದರಲ್ಲಿ ೧೭೦ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಎನ್‌ಡಿಆರ್‌ಎಫ್ ಅಡಿಯಲ್ಲಿ ೧೦.೪೩ ಕೋಟಿ ಹಂಚಿಕೆಯಾಗಿದೆ. ಹಲವಾರು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿದ್ದು ಸಕಾಲದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೆ ೩೦ ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ರೂ.೫ ಕೋಟಿ ವೆಚ್ಚದಲ್ಲಿ ಪೊನ್ನಂಪೇಟೆಯಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಹೊಸದಾಗಿ ಕ್ರೀಡಾ ವಸತಿ ನಿಲಯದ ಕಟ್ಟಡವನ್ನು ಪ್ರಾರಂಭಿಸಲು ಆಡಳಿತ್ಮಾಕ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಸರ್ಕಾರಿ ಬೋಧಕ ಆಸ್ಪತ್ರೆಯಲ್ಲಿ ಎಂಅರ್‌ಐ ಯಂತ್ರವನ್ನು ಪ್ರತಿಷ್ಠಾಪಿಸಿದ್ದು, ಟೆಲಿರೇಡಿಯಾಲಜಿ ಮೂಲಕ ಎಕ್ಸ್-ರೇ, ಸಿಟಿ ಹಾಗೂ ಎಂಆರ್‌ಐ ವರದಿಗಳನ್ನು ನೀಡಲಾಗುತ್ತಿದೆ. ಕಾಲೇಜಿನಲ್ಲಿ ಪ್ರಸ್ತುತ ಇರುವ ವಿದ್ಯಾರ್ಥಿಗಳ ಸೇರ್ಪಡೆ ಸಂಖ್ಯೆಯನ್ನು ೨೦೦ಕ್ಕೇ ಉನ್ನತಿಕರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ ಎಂಎಸ್ಸಿ ನಸಿರ್ಂಗ್ ಆರಂಭಿಸಲು ರಾಜೀವ್‌ಗಾಂಧಿ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವಸತಿ ಯೋಜನೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಗೆ ೨೪೪೫ ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿ ಇರುತ್ತದೆ. ಇದರೊಂದಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿಯೂ ಮನೆ ಮಂಜೂರಾಗಿದ್ದು, ಆಯ್ಕೆ ಪ್ರಕ್ರಿಯೆ ನಡೆದಿದೆ. ಕೊಡಗು ಜಿಲ್ಲೆಯಲ್ಲಿ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ನಿವೇಶನ/ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ರೂ.೧೦.೪೪ ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿ, ರೂ.೨.೬೦ ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಬೆನಕ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಬಾಲಕರ ಬಾಲ ಮಂದಿರ, ಕೇಂದ್ರೀಯ ವಿದ್ಯಾಲಯ, ಬಾಲಕಿಯರ ಬಾಲ ಮಂದಿರ, ಸಂತ ಜೋಸೆಫರ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಗಿರಿಜನ ಆಶ್ರಮ ಶಾಲೆ ನಿಟ್ಟೂರು, ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸಂತ ಮೈಕಲರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಸೈನಿಕ ಶಾಲೆ ಕೂಡಿಗೆ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಳೆ ಮತ್ತು ವಿದ್ಯಾರ್ಥಿಗಳಿಂದ ಮೂಡಿಬಂದ ಪಥಸಂಚಲನ ಗಮನ ಸೆಳೆಯಿತು.