ಬುದ್ಧಿವಂತರ ಸೃಷ್ಟಿಸುವ ಶಕ್ತಿ ಭಾರತಕ್ಕಿದೆ: ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾರಾಜ್

19
Published on

ಮೈಸೂರು: ಜಗತ್ತಿಗೆ ಬೇಕಾಗುವಷ್ಟು ಬುದ್ಧಿವಂತರನ್ನು ಸೃಷ್ಠಿಸುವ ಶಕ್ತಿ ಭಾರತದ ಮಣ್ಣಿಗಿದೆ ಎಂದು ಗದಗಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾರಾಜ್ ಹೇಳಿದರು.

ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್‌ನಿಂದ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸಂಭ್ರಮ ನೈಪುಣ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಾಚೀನ ವೇದ-ಉಪನಿಷತ್ತು ಕಾಲದಿಂದಲೂ ಬುದ್ಧಿವಂತರನ್ನು ಸೃಷ್ಟಿ ಮಾಡಿ, ಜಗತ್ತಿನ ಮನುಕುಲದ ಕಣ್ಣು ತೆರೆಸುವ ಸಾಧಕರನ್ನು ಸೃಷ್ಟಿಸಿದ ಕೀರ್ತಿ ಭಾರತದ ಪುಣ್ಯಭೂಮಿಗೆ ಸಲ್ಲಬೇಕು. ದೇಶ ವಿದೇಶಗಳನ್ನು ಸುತ್ತಿದಾಗ ನಾನು ಈ ಅಂಶಗಳನ್ನು ಸಂಗ್ರಹಿಸಿ ಹಾಗೂ ಅಮೂಲ್ಯ ಗ್ರಂಥಗಳನ್ನು ಆಧರಿಸಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಹೇಳಿದರು.

ಪೋಷಕ ವರ್ಗ ಇಂದು ಮಕ್ಕಳ ಮೇಲೆ ತನ್ನ ಪ್ರಭಾವವನ್ನು ಬೀರುವಲ್ಲಿ ವಿಫಲವಾಗುತ್ತಿದೆ. ಮಕ್ಕಳ ಬುದ್ಧಿವಂತಿಕೆಯನ್ನು ಗುರುತಿಸುವಲ್ಲಿ ತಮ್ಮ ಜವಾಬ್ದಾರಿಯನ್ನು ಮರೆಯುತ್ತಿದೆ. ಈ ಕಾರಣಕ್ಕಾಗಿಯೇ ಕೆಲವು ಮಕ್ಕಳು ಶಿಕ್ಷಣ ಹಾಗೂ ಬದುಕಿನ ಗುರಿ ಸಾಧಿಸುವಲ್ಲಿ ಹಿಂದುಳಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹುಟ್ಟಿದಾಗ ಕಣ್ಣು ಬಿಡುವ ಪ್ರತಿಯೊಂದು ಮಗುವಿನಲ್ಲೂ ಬುದ್ಧಿ ಇದ್ದೇ ಇರುತ್ತದೆ. ಆದರೆ ಆ ಬುದ್ಧಿವಂತನನ್ನು ಗುರುತಿಸುವಲ್ಲಿ ಪೋಷಕರು ವಿಫಲರಾಗುತ್ತಾರೆ. ಶಿಕ್ಷಕರೂ ಕೂಡ ಕೆಲವೊಮ್ಮೆ ಇಂತಹದ್ದೇ ತಪ್ಪು ಮಾಡುತ್ತಾರೆ. ಮಕ್ಕಳ ನಡುವೆ ಹೋಲಿಕೆ ಮಾಡುವುದು ಮಗುವಿನ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.

ಭಾರತದ ಕುಟುಂಬ ಸಂಸ್ಕೃತಿ ಸಂಸ್ಕಾರದ ಶಿಕ್ಷಣವನ್ನು ನೀಡುವ ಪದ್ಧತಿಯಾಗಿತ್ತು. ಆದರೆ, ಇಂದಿನ ಆಧುನಿಕ ಯುಗದಲ್ಲಿ ಮಾನವಿಯ ಸ್ಪರ್ಶಗಳಿಂದ ನಾವು ದೂರವಾಗುತ್ತಿದ್ದೇವೆ. ಇದರಿಂದಾಗಿ ಮಕ್ಕಳ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದೇವೆ. ಮಗುವಿನ ಸಾಮರ್ಥ್ಯಕ್ಕನುಗುಣವಾಗಿ ಮಕ್ಕಳ ಬೆಳವಣಿಗೆಯನ್ನು ಪೋಷಿಸಬೇಕು, ಉತ್ತೇಜಿಸಬೇಕು ಹೊರತು ನಮ್ಮ ಒತ್ತಡವನ್ನು ಹೇರಿ ಮಕ್ಕಳ ಭವಿಷ್ಯ ಅಂಧಕಾರಕ್ಕೆ ತಳ್ಳುವಂತಾಗಬಾರದೆಂಬುದೇ ನಮ್ಮ ಆಶಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಸಾಧಕನಿರುತ್ತಾನೆ. ಆದರೆ, ಕಷ್ಟದ ಪರಿಚಯ ಒಬ್ಬ ಮಗುವಿನಲ್ಲಿ ಸಾಧಕನಾಗುವ ಗುರಿಯತ್ತ ಸಾಗಲು ಪ್ರೇರೇಪಿಸುತ್ತದೆ. ಒಬ್ಬ ಸಾಧಕನಿಗೆ ಜಾತಿ, ಶ್ರೀಮಂತಿಕೆ, ಬಡತನ ಆಧಾರವಾಗುವುದಿಲ್ಲ. ಛಲ ಅವನನ್ನು ಸಾಧನೆಯ ಗುರಿಯತ್ತ ಕೊಂಡೊಯ್ಯುತ್ತದೆ ಎಂದು ವಿಶ್ಲೇಷಿಸಿದರು.

ಈ ನಿಟ್ಟಿನಲ್ಲಿ ನಗರ-ಗ್ರಾಮೀಣ ಪ್ರದೇಶದ ಅಂತರವಿಲ್ಲದೇ ಸಾಧಿಸಬಹುದು ಎನ್ನುವುದಕ್ಕೆ ಗ್ರಾಮೀಣ ಪ್ರದೇಶದಿಂದ ಬಂದ ತಾವೇ ಒಂದು ಉದಾಹರಣೆಯಾಗಿರುವುದಾಗಿ ಹೇಳಿದರು.

ಸರ್ಕಾರದ ವ್ಯವಸ್ಥೆಯಲ್ಲಿ ನಾವು ಅಧಿಕಾರದಲ್ಲಿದ್ದಾಗ ನಮ್ಮ ಹಿಂದಿನ ದಾರಿಯನ್ನು ನೆನಪಿಸಿಕೊಂಡು ಹೆಜ್ಜೆಯಿಟ್ಟರೆ ಸಮಾಜದ ಕಣ್ಣೊರೆಸಬಹುದು. ಸಮಾಜದ ದನಿಯಾಗಬಹುದು, ಶಿಕ್ಷಣಕ್ಕೆ ಮಾದರಿಯಾಗಬಹುದು ಎನ್ನುವುದನ್ನು ತಮ್ಮ ಸೇವಾ ಅನುಭವದಲ್ಲಿ ಅನುಸರಿಸಿದ್ದಾಗಿ ತಿಳಿಸಿದರು.

ನೈಪುಣ್ಯೋತ್ಸವ ಅಂಗವಾಗಿ ಸನ್ಮಾನ ಸ್ವೀಕರಿಸಿದ ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ ಮಾತನಾಡಿ, ಮಕ್ಕಳು ಪೋಷಕರನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಪೋಷಕರು ಸೃಷ್ಟಿಸಬೇಕು ಎಂದು ಹೇಳಿದರು.

ನೈಪುಣ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ರಘು ಕಾರ್ಯಕ್ರಮದ ಅಧ್ಯಕ್ಷ ತೆವಹಿಸಿದ್ದರು. ಶಾಲೆಯ ಪ್ರಾಂಶುಪಾಲೆ ಶಾಂತಿನಿ ಜೆರಾಲ್ಡ್, ಚಿಣ್ಣರ ವಿಭಾಗದ ಮುಖ್ಯಸ್ಥೆ ಭಾವನಾ ಶ್ರೀಕಾಂತ್ ಇತರರು ಇದ್ದರು.

ಸಂಸ್ಥೆಯ ಹಿರಿಯ ಶಿಕ್ಷಕಿ ಶಾಲಿನಿ ಮಾಜೊ ಅವರಿಗೆ ಹತ್ತು ಸಾವಿರ ನಗದು ಪುರಸ್ಕೃತವನ್ನೊಳಗೊಂಡ ನೈಪುಣ್ಯಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇತರ ಶಿಕ್ಷಕರಾದ ದೇಚಮ್ಮ, ಭಾರ್ಗವಿ, ತೀರ್ಥಕುಮಾರ ಅವರನ್ನು ಪುರಸ್ಕರಿಸಲಾಯಿತು.

ಚಿಣ್ಣರೊಂದಿಗೆ ಹಿರಿಯರ ಹೆಜ್ಜೆ:

ಶಾಲೆಯ ಚಿಣ್ಣರ ಮನರಂಜನಾ ಕಾರ್ಯಕ್ರಮ ಜೊತೆಗೆ ಕೂಡು ಕುಟುಂಬವನ್ನು ಉತ್ತೇಜಿಸುವ ‘ಬೇರು-ಬಳ್ಳಿ’ ಕಾರ್ಯಕ್ರಮದಲ್ಲಿ ರ‌್ಯಾಂಪ್ ವಾಕ್ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳು, ಅವಿಭಕ್ತ ಕುಟುಂಬದ ಸಮಾಗಮ ಉತ್ತಮ ಮನರಂಜನೆಯನ್ನು ಒದಗಿಸಿತ್ತಲ್ಲದೇ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾಕ್ಷೀಕರಿಸಿತು.

ಕೂಡು ಕುಟುಂಬ ಪರಿಣಾಮದ ಕುರಿತು ಕೂಡು ಕುಟುಂಬದ ಪ್ರತಿನಿಧಿಗಳು ಈ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡರು. ಮಕ್ಕಳ ತಾಯಂದಿರು ಸಮೂಹ ನೃತ್ಯ ಪ್ರದರ್ಶಿಸಿ ನೈಪುಣ್ಯೋತ್ಸವಕ್ಕೆ ಹಬ್ಬದ ಮೆರಗನ್ನು ತಂದರು.

ಅಲ್ಲದೇ ಮನರಂಜನಾ ಕಾರ್ಯಕ್ರಮದಲ್ಲಿ ವಿದೂಷಿ ಡಾ.ಶಾಂಭವಿಸ್ವಾಮಿ ಅವರ ನಿರ್ದೇಶನದದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು 1.30ಕ್ಕೆ ನೃತ್ಯ ರೂಪಕವನ್ನು ಪ್ರದರ್ಶಿಸಿ, ಪರಿಸರ ಜಾಗೃತಿ ಮೂಡಿಸುವ ಸಂದೇಶ ನೀಡಿದರು. ನೃತ್ಯ ರೂಪಕದಲ್ಲಿ ಭವಿಷ್ಯದ ಪೀಳಿಗೆಯ ನಮಗೆ ಏನನ್ನೂ ಕೊಡಲಾಗದಿದ್ದರೂ ಪರವಾಗಿಲ್ಲ, ಒಂದಷ್ಟು ಗಾಳಿ ಉಳಿಸಿ, ಉತ್ತಮ ಜಲಸಂಪತ್ತು, ಉಳಿಸಿ ಅರಣ್ಯ ಸಂಪತ್ತು ಉಳಿಸಿ, ಜೀವ ವೈವಿಧ್ಯತೆ ಉಳಿಸಿ, ನಾವೂ ಬದುಕಲು ಪರಿಸರ ಉಳಿಸಿ ಎನ್ನುವ ಸಂದೇಶ ಹೃದಯಸ್ಪರ್ಶಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net