

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನದ್ರೋಹಿ ಗ್ಯಾರಂಟಿಯಾದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು ಜನಪರ ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿನ ಹೆಬ್ಬಳ್ಳಿ ಅಗಸಿ ಮಣಿಕಂಠ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದೆ. ಆದರೆ ದೇಶದ ಅಭಿವೃದ್ಧಿಗೆ ಪಣ ತೊಟ್ಟಿರುವ ಪ್ರಧಾನಿ ಮೋದಿ ಬಡವರ ಮನೆ ಮನೆಗೆ ಸೇವೆಗಳನ್ನು ತಲುಪಿಸುತ್ತಿದ್ದಾರೆ. ದೇಶದ ಎಲ್ಲ ಜನರ ವಿಶ್ವಾಸಗಳಿಸಿ ದೇಶವನ್ನು ಪ್ರಗತಿಯತ್ತ ಸಾಗಿಸುತ್ತಿದ್ದಾರೆ ಎಂದರು.
ದುರ್ಬಲ ದೇಶಗಳ ಪಟ್ಟಿಯಲ್ಲಿದ್ದ ಭಾರತವು ಆರ್ಥಿಕ ಶಕ್ತಿಯಲ್ಲಿ ವಿಶ್ವದ ಅಗ್ರ ಟಾಪ್ 5ನಲ್ಲಿ ಬರುವಂತೆ ಮಾಡಿದ ಶ್ರೇಯಸ್ಸು ಪ್ರಧಾನಿಗೆ ಸಲ್ಲಲಿದೆ. 2027ರ ವೇಳೆಗೆ ಭಾರತ ಅಗ್ರ 3 ಸದೃಢ ಆರ್ಥಿಕತೆಯ ದೇಶಗಳಲ್ಲಿ ಒಂದಾಗುವಂತೆ ಮಾಡುವುದು ಪ್ರಧಾನಿಯ ಸಂಕಲ್ಪ. ಕೇಂದ್ರ ಸರ್ಕಾರ ಜನರ ಒಳಿತಿಗೆ ರೂಪಿಸಿದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಲ ಪಡೆದಿದ್ದ ಶ್ರೀಮಂತರು, ನರೇಂದ್ರ ಮೋದಿ ಪ್ರಧಾನಿ ಆಗುತ್ತಿದ್ದಂತೆ ದೇಶ ಬಿಟ್ಟರು. ಅಂತಹವರನ್ನು ಮರಳಿ ದೇಶಕ್ಕೆ ಕರೆಯಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಕೇಂದ್ರದ ಮುದ್ರಾ ಯೋಜನೆ ಮೂಲಕ ಬಡ ಜನರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಾಲ ಪಡೆದವರು ವ್ಯಾಪಾರ-ವಹಿವಾಟು ಮಾಡಿಕೊಂಡು ಸುಗಮವಾಗಿ ಜೀವನ ನಡೆಸಲು ಅನುಕೂಲವಾಗಿದೆ ಎಂದರು.
ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ ದೇಸಾಯಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಸುನೀಲ ಮೋರೆ, ಪಾಲಿಕೆ ಸದಸ್ಯರಾದ ಅನಿತಾ ಚಳಗೇರಿ, ರತ್ನಾಬಾಯಿ ನಾಝರೆ, ಇತರರು ಇದ್ದರು.