

ಮೈಸೂರು; ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಭಾನುವಾರ ಸ್ವಚ್ಛ ಭಾರತ ಅಭಿಯಾನದ ಉದ್ಘಾಟನೆ ಮತ್ತು ಪ್ರತಿಜ್ಞೆ ಸ್ವೀಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕೇಂದ್ರ ಸರ್ಕಾರದ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಡಾ.ಎಸ್.ಗಾಂಧಿ ದಾಸ್ ಉದ್ಘಾಟಿಸಿದರು. ಭಾರತ ಬಯಲು ಮೂತ್ರ ವಿಸರ್ಜನೆ, ಮಲ ವಿಸರ್ಜನೆಯ ತಾಣವೆಂದು ಬ್ರಿಟಿಷರು ಟೀಕಿಸುತ್ತಿದ್ದರು. ಆದರೀಗ ದೇಶ ಪ್ರತಿ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ.
ಕೇಂದ್ರ ಸರ್ಕಾರ ಸ್ವಚ್ಛತೆ ಕುರಿತು ಪ್ರಚಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಿಎಸ್‌ಆರ್‌ಟಿಐ ಗೋಪಾಲಪುರ ಗ್ರಾಮವನ್ನು ದತ್ತು ಪಡೆದು ಸ್ವಚ್ಛತಾ ಸಾಮಗ್ರಿ ಸರಬರಾಜು ಮಾಡಿ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದೆ ಎಂದು ತಿಳಿಸಿದರು.
ಭೂಮಿ ಕಲುಷಿತಗೊಳ್ಳುತ್ತಿದೆ. ಪ್ಲಾಸ್ಟಿಕ್ ಸೇವನೆ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಾಗರದಲ್ಲಿ ಪ್ಲಾಸ್ಟಿಕ್‌ತ್ಯಾಜ್ಯ ಸಂಗ್ರಹವಾಗುತ್ತಿದೆ. ನಾವು ಪ್ರಕೃತಿಗೆ ಹಾನಿ ಮಾಡಿದರೆ ಮುಂದಿನ ಪೀಳಿಗೆ ತೊಂದರೆಗೆ ಸಿಲುಕಿಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ನಾಲ್ವರು ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಹಿರಿಯ ವಿಜ್ಞಾನಿಗಳಾದ ಡಾ.ಕೆ.ಬಿ.ಚಂದ್ರಶೇಖರ್,
ಡಾ.ಆರ್.ಭಾಗ್ಯಾ, ಡಾ.ಎಂ.ಕೆ.ರಘುನಾಥ್, ಸಂಸ್ಥೆಯ ಸುಮಾರು 200 ವಿಜ್ಞಾನಿಗಳು, ಅಧಿಕಾರಿಗಳು, ಯೋಜನೆಯ ಸಹಾಯಕರು, ಸಿಬ್ಬಂದಿ ಭಾಗವಹಿಸಿದ್ದರು.