

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ಭಾರತಕ್ಕೆ ಪ್ರಬಲ ನಾಯಕತ್ವ ಸಿಕ್ಕಿದೆ. ಜಾಗತಿಕ ಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದು, ರಾಜಕೀಯ ಕಾರಣಕ್ಕಾಗಿ ಮೋದಿ ಅವರನ್ನು ಟೀಕಿಸುವ ಪ್ರತಿಪಕ್ಷ ನಾಯಕರಿಗೂ ಮೋದಿ ಅವರ ಸಾಮರ್ಥ್ಯದ ಅರಿವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಕೇಂದ್ರ ಸರ್ಕಾರದ 11 ವರ್ಷಗಳ ಆಡಳಿತದ ಕುರಿತು ಅವಲೋಕನ ಮಾಡಿದ ಅವರು, ಇಂದು ವಿಶ್ವವೇ ಭಾರತದೆಡೆಗೆ ತಿರುಗಿ ನೋಡುತ್ತಿದೆ. ದೇಶ 4ನೇ ಪ್ರಬಲಶಕ್ತಿಯಾಗಿ ಹೊರಹೊಮ್ಮಿದೆ. ವಿಶ್ವಗುರುವಾಗುವ ನಿಟ್ಟಿನಲ್ಲಿ ಭಾರತ ಸಾಗುತ್ತಿದೆ. ಇದಕ್ಕೆ ಮೋದಿ ಅವರ ಸಮರ್ಥ ಆಡಳಿತವೇ ಕಾರಣ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಾಭಿಮಾನಿ, ಸಶಕ್ತ ಭಾರತಕ್ಕೆ ಮೋದಿ ಅಡಿಪಾಯ ಹಾಕಿದ್ದಾರೆ. ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್, ಜನಧನ್ ಮುಂತಾದ ಯೋಜನೆಗಳು ಸಾಮಾನ್ಯ ಜನರು, ರೈತರ ಬದುಕನ್ನೆ ಬದಲಿಸಿವೆ. ಬ್ಯಾಂಕ್‌ನತ್ತ ಮುಖ ಮಾಡದ ಲಕ್ಷಾಂತರ ಮಂದಿ ಇಂದು ಬ್ಯಾಂಕಿಂಗ್ ವ್ಯವಹಾರ ನಡೆಸುವ ಮೂಲಕ ಆರ್ಥಿಕ ನೆರವು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ರಕ್ಷಣಾ ವಲಯದಲ್ಲಿ ಸ್ವಾವಲಂಬನೆ, ವಕ್ಫ್ ಕಾಯ್ದೆಗೆ ತಿದ್ದುಪಡಿ, ತ್ರಿವಳ ತಲಾಕ್ ರದ್ದತಿ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 371ನೇ ವಿಧಿಯನ್ನು ರದ್ದು ಮಾಡಿದ್ದು ಮೋದಿ ಆಡಳಿತದ ಕ್ರಾಂತಿಕಾರಿ ತೀರ್ಮಾನಗಳಾಗಿವೆ. ವಸತಿ ಯೋಜನೆ ಮೂಲಕ ಸೂರು ಜನರಿಗೆ ಸೂರು ಭಾಗ್ಯ ಕಲ್ಪಿಸಿರುವುದು ಕೂಡ ಕೇಂದ್ರ ಸರ್ಕಾರದ ಸಾಧನೆಯಾಗಿದೆ ಎಂದರು.
ಸ್ವಾತಂತ್ರೃದ ಬಳಿಕ ದೇಶಕ್ಕೆ ಪ್ರಬಲ ನಾಯಕತ್ವ ಸಿಕ್ಕಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ 11 ವರ್ಷಗಳ ಸಾಧನೆಯನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಕೆ.ಜಿ.ಕುಮಾರಸ್ವಾಮಿ, ಕೆ.ಬಿ.ಅಶೋಕ ನಾಯ್ಕ, ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಪಾಲಿಕೆ ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ಸುದ್ದಿಗೋಷ್ಠಿಯಲ್ಲಿದ್ದರು.