

ಹುಬ್ಬಳ್ಳಿ : ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಹೊರಬಂದಿಲ್ಲ, ಬದಲಾಗಿ ಆ ಒಕ್ಕೂಟವೇ ಕಾಂಗ್ರೆಸ್ಅನ್ನು ಹೊರಹಾಕಿದೆ . ಉಳಿದ ಇಂಡಿಗಳೆಲ್ಲ ಕೂಡಿ ಇವರ ಕೈಗೆ ಗಿಂಡಿ (ಚೊಂಬು) ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಇಡೀ ದೇಶದಲ್ಲಿಯೇ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯಗಳಲ್ಲಿ ಒಳ ಜಗಳ ಶುರುವಾಗಿದೆ. ಅಧಿಕಾರದಲ್ಲಿರುವ ಮೂರೂ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಆ ಪಕ್ಷ ಎಲ್ಲರಿಗೂ ಭಾರವಾಗಿದೆ ಎಂದರು.
ಕಾಂಗ್ರೆಸ್ನ ಸಿಎಲ್ಪಿ ಮೀಟಿಂಗ್ ನಡೆಯುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲಾ ಆರು ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಯಾವ ಕಾರಣಕ್ಕೆ ಬರುತ್ತಾರೆ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.
ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗುವ ಚರ್ಚೆ ಹಾಗೂ ಒಳಜಗಳ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ನಡೆಯುತ್ತಿದೆ. ಇದೀಗ ಆ ಪಕ್ಷದಲ್ಲಿನ ಅತೃಪ್ತಿ ದೊಡ್ಡ ಮಟ್ಟಕ್ಕೆ ಏರಿದೆ. ಮತ್ತೊಂದೆಡೆ ಭ್ರಷ್ಟಾಚಾರ ಹೆಚ್ಚಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರಕ್ಕೆ ಆಡಳಿತದ ಮೇಲಿನ ನಿಯಂತ್ರಣ ಇಲ್ಲದಂತಾಗಿದೆ ಎಂದು ಹೇಳಿದರು.