

ದೇವದುರ್ಗ: ಜಾನಪದ ಉತ್ಸವ, ಹಾಡು, ಕುಣಿತ, ನೃತ್ಯ ನಮ್ಮ ಭಾರತೀಯ ಸಂಸ್ಕೃತಿ ಪ್ರತೀಕವಾಗಿದ್ದು, ಪ್ರತಿಯೊಬ್ಬರೂ ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಪಾಟೀಲ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ-2025 ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಜಾನಪದ ನಮ್ಮ ಜೀವನ ಪದ್ಧತಿಯಾಗಿದ್ದು ಪ್ರತಿಯೊಬ್ಬರೂ ಇದರ ಗರಡಿಯಲ್ಲಿ ಬೆಳೆದಿದ್ದಾರೆ. ಜಾನಪದ ಭಾರತದ ಸಂಸ್ಕೃತಿ ಜಗತ್ತಿಗೆ ಸಾರಿಹೇಳುತ್ತದೆ.
ನಾನಾ ವಿಧದ ನೃತ್ಯ, ಭರತ ನಾಟ್ಯ, ಡೊಳ್ಳು ಕುಣಿತ, ಲಾವಣಿ, ಗೀಗಿಪದ, ರೈತ ಗೀತೆ, ಮಹಿಳೆಯರ ಗೀತೆಗಳು ಜಾನಪದದ ಭಾಗಗಳಾಗಿವೆ. ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣ ಹಿಂದೆ ಬಿದ್ದಿರುವ ಇಂದಿನ ಯುವಜನತೆ ಸಂಸ್ಕೃತಿ ಮರೆಯುತ್ತಿದ್ದಾರೆ. ಅವರಿಗೆ ಈ ಬಗ್ಗೆ ಅರಿವು ಮೂಡಿಸುವ ಜತೆಗೆ ಪ್ರೋತ್ಸಾಹಿಸಲು ಜಾನಪದ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಾನಪದ ಉತ್ಸವ ನಿಮಿತ್ತ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಇಲ್ಲಿನ ಜೆಪಿ ವೃತ್ತದಿಂದ ಕಾಲೇಜುವರೆಗೆ ಜಾನಪದ ವಸ್ತುಗಳನ್ನು ಜೋಡೆತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿದರು. ವಿದ್ಯಾರ್ಥಿನಿಯರು ಇಳಕಲ್ ಸೀರೆ, ಪ್ರಾಧ್ಯಾಪಕರು, ಯುವಕರು ಲುಂಗಿ, ಧೋತಿ, ಶೆಲ್ಯಾ ತೊಟ್ಟು ಗಮನ ಸೆಳೆದರು. ಡೊಳ್ಳು ಕುಣಿತ, ಕುಂಭಮೇಳ ಗಮನ ಸೆಳೆಯಿತು.
ಪ್ರಾಧ್ಯಾಪಕರಾದ ಡಾ.ಮಲ್ಲಯ್ಯ, ಡಾ.ಅನಂತ, ಹನುಮಂತ ಜಗ್ಲಿ, ಚಂದ್ರಶೇಖರ ಅಕ್ಕರಕಿ, ಗೌರಮ್ಮ, ಶ್ರೀದೇವಿ, ನಲ್ಲರೆಡ್ಡಿ, ಮುನಿಯಪ್ಪ ನಾಗೋಲಿ, ಮಲ್ಲೇಶಪ್ಪ, ಮರೆಪ್ಪ, ಹನುಮೇಶ್, ಅಂಬರೀಷ್, ಚಂದ್ರಮಪ್ಪ, ಗಾದಿಲಿಂಗಪ್ಪ, ಖಾಜಾಮಯಿನುದ್ದೀನ್ ಇತರರಿದ್ದರು.