

ಮಡಿಕೇರಿ:
ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಮಡಿಕೇರಿ ನಗರದ ಹೃದಯ ಭಾಗ ಜನರಲ್ ತಿಮ್ಮಯ್ಯ ವೃತ್ತ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಬಿಳಿಗೇರಿ ಗ್ರಾ.ಪಂ ಮಾಜಿ ಸದಸ್ಯ ಮಂಡುವಂಡ ರಮೇಶ್ ಅಯ್ಯಪ್ಪ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಂದಿರಾ ಕ್ಯಾಂಟೀನ್ ಪುನಶ್ಚೇತನಗೊಳಿಸಲು ಪಣ ತೊಟ್ಟಿದೆ. ಜಿಲ್ಲೆಯಲ್ಲೂ ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕ್ಯಾಂಟೀನ್ ಗೆ ಕಾಯಕಲ್ಪ ನೀಡುವುದರೊಂದಿಗೆ ಬಡವರ ಅನುಕೂಲಕ್ಕಾಗಿ ಜಿಲ್ಲಾಸ್ಪತ್ರೆ ಬಳಿ ಮತ್ತೊಂದು ಇಂದಿರಾ ಕ್ಯಾಂಟೀನ್ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠೀಯಲ್ಲಿ ಒತ್ತಾಯಿಸಿದರು.
ಕೆಲವು ವರ್ಷಗಳ ಹಿಂದೆ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ಆರಂಭಗೊಂಡು ಬಡವರಿಗೆ ಕಡಿಮೆ ಖರ್ಚಿನಲ್ಲಿ ಊಟ, ಉಪಹಾರ ದೊರೆಯುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಇಲ್ಲಿನ ಕಾರ್ಯಚಟುವಟಿಕೆ ಸ್ಥಗಿತಗೊಂಡು ಬಡವರು ಹಾಗೂ ಕಾರ್ಮಿಕ ವರ್ಗದ ಊಟಕ್ಕೆ ತೊಂದರೆ ಎದುರಾಯಿತು.
ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿ ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮೂಲೆ-ಮೂಲೆಗಳಿಂದ ರೋಗಿಗಳು ಬರುತ್ತಾರೆ. ಬಡ ರೋಗಿಗಳಿಗೆ ಆಸ್ಪತ್ರೆಯ ವತಿಯಿಂದ ಊಟೋಪಚಾರದ ವ್ಯವಸ್ಥೆ ಇದೆ, ಆದರೆ ರೋಗಿಗಳ ಆರೈಕೆಗೆ ಮತ್ತು ಸಾಂತ್ವನ ಹೇಳಲು ಬರುವವರಿಗೆ ಕಡಿಮೆ ದರದಲ್ಲಿ ಊಟ ದೊರೆಯಬೇಕಾಗಿದೆ. ಜಿಲ್ಲಾಸ್ಪತ್ರೆಯ ಆವರಣ ಅಥವಾ ಜನರಲ್ ತಿಮ್ಮಯ್ಯ ವೃತ್ತದ ಬಳಿ ಇರುವ ನಿರೀಕ್ಷಣಾ ಮಂದಿರದ ಆವರಣದಲ್ಲಿ ಮತ್ತೊಂದು ಇಂದಿರಾ ಕ್ಯಾಂಟೀನ್ ನ್ನು ಆರಂಭಿಸಿದರೆ ಬಡವರಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಪ್ರತಿದಿನ ನೂರಾರು ಪ್ರಯಾಣಿಕರು ಬಂದು ಹೋಗುತ್ತಿದ್ದು, ಇವರಿಗೂ ಇಂದಿರಾ ಕ್ಯಾಂಟೀನ್ ಸಹಕಾರಿಯಾಗಲಿದೆ ಎಂದು ರಮೇಶ್ ಅಯ್ಯಪ್ಪ ಅಭಿಪ್ರಾಯಪಟ್ಟರು.
ಈ ಬಗ್ಗೆ ಜಿಲ್ಲೆಯ ಇಬ್ಬರು ಶಾಸಕರುಗಳಿಗೆ ಮನವಿ ಪತ್ರ ಸಲ್ಲಿಸುವುದಾಗಿ ಹೇಳಿದರು.
ಅಲ್ಲಾರಂಡ ರಂಗಚಾವಡಿಯ ಅಧ್ಯಕ್ಷ ಅಲ್ಲ್ಲಾರಂಡ ವಿಠಲ ನಂಜಪ್ಪ ಮಾತನಾಡಿ ಮಂಗಳೂರು ರಸ್ತೆಯಲ್ಲಿರುವ ಬಸ್ಸು ತಂಗುದಾಣದ ಕೆಳಭಾಗದಲ್ಲಿ ಇಂದಿರಾ ಕ್ಯಾಂಟೀನ್ ನ್ನು ಆರಂಭಿಸಿದರೆ ಈ ಭಾಗದ ಎಲ್ಲಾ ರಸ್ತೆಗಳ ಮೂಲಕ ತೆರಳುವವರಿಗೂ ಸಹಕಾರಿಯಾಗಲಿದೆ ಎಂದರು.